ಮಡಿಕೇರಿ, ಆ. ೧೨: ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯ ೨೫ನೆ ವರ್ಷದ ಆದರ್ಶ ರತ್ನ ಪ್ರಶಸ್ತಿಗೆ ಮೂಲತಃ ಕೊಡಗಿನವರಾದ ಪತ್ರಕರ್ತ ಹಾಗೂ ಸಮಾಜ ಸೇವಕ ಸಿ.ಎಸ್ ಬೋಪಯ್ಯ ಚೋವಂಡ ಆಯ್ಕೆಯಾಗಿದ್ದು, ವಯಾಲಿಕಾವಲ್ ಶ್ರೀ ಕೃಷ್ಣ ದೇವರಾಯ ಕಲಾ ಮಂದಿರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಳೆದ ೧೮ ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬೋಪಯ್ಯ ಅವರು ಕೋವಿಡ್ ಸಂದರ್ಭ ಸಲ್ಲಿಸಿದ ಸೇವೆ ಮತ್ತು ಕಳೆದ ಎರಡು ವರ್ಷಗಳಿಂದ ಉಚಿತ ಆಪ್ತ ಸಮಾಲೋಚನೆ ನಡೆಸುತ್ತಿರುವುದನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಚ್.ಸಿ ಕೃಷ್ಣಪ್ಪ, ಅಧ್ಯಕ್ಷ ಡಾ.ಆರ್ ಹರಿಕೃಷ್ಣ ಹಾಜರಿದ್ದರು.