ಮಡಿಕೇರಿ, ಆ. ೧೨: ಕ್ಷಿಪ್ರಕ್ರಾಂತಿ ನೆಪದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ವೃತ್ತದಲ್ಲಿ ಜಮಾಹಿಸಿದ ನೂರಾರು ಸಂಖ್ಯೆಯ ಪ್ರತಿಭಟನಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ನೆರೆರಾಷ್ಟç ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ ಹೆಸರಿನಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವೆಸಗಿ ಹಿಂದೂಗಳನ್ನು ಅಲ್ಲಿಂದ ಓಡಿಸುವ ಹುನ್ನಾರ ನಡೆಯುತ್ತಿದೆ. ಮೀಸಲಾತಿ ಹೆಸರಿನಲ್ಲಿ ಕಾಣದ ಶಕ್ತಿಗಳು ಒಂದುಗೂಡಿ ಅಲ್ಲಿನ ಪ್ರಜಾಪ್ರಭುತ್ವ ಕೆಳಗಿಳಿಸಿ ನಿರಂಕುಶ ಸ್ಥಿತಿ ತರುವ ಕೆಲಸ ಮಾಡಿವೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಹಿಂದೂಗಳ ಧ್ವನಿಯಾಗಲು ಭಾರತಕ್ಕೆ ಮಾತ್ರ ಸಾಧ್ಯ. ಹಿಂದೂ ಸಮಾಜ ರಕ್ಷಣೆಗೆ ನಿಲ್ಲುವ ಸಂದೇಶ ನೀಡಲು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಗಿದೆ. ಕೊಡಗಿನಲ್ಲೂ ಅಕ್ರಮ ಬಾಂಗ್ಲ ವಲಸಿಗರು ಹೆಚ್ಚಿದ್ದಾರೆ. ಅವರ ದಾಖಲೆಗಳನ್ನು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿಡುವ ಕೆಲಸವಾಗಬೇಕು. ಅಸ್ಸಾಂ ಕಾರ್ಮಿಕ ಹೆಸರಲ್ಲಿ ಬಾಂಗ್ಲಾದಿAದ ನುಸುಳುಕೋರರು ಆಗಮಿಸುತ್ತಿರುವುದು ಆತಂಕಕಾರಿ ವಿಚಾರ. ಇದನ್ನು ಬೆಳೆಗಾರರು ಗಂಭೀರವಾಗಿ ಪರಿಗಣಿಸಿ ಎಚ್ಚರವಹಿಸಬೇಕು. ಈಗಾಗಲೇ ಸ್ಥಳೀಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ನಡೆದಿವೆ. ಹೀಗೆ ಮುಂದುವರೆದರೆ ಸ್ಥಳೀಯರು ಬದುಕಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ವಲಸಿಗರಿಗೆ ಕಡಿವಾಣ ಹಾಕುವ ದೃಷ್ಟಿಯಲ್ಲಿ ಆಡಳಿತ ಕ್ರಮವಹಿಸಬೇಕು. ಹೊರ ರಾಜ್ಯ, ಹೊರದೇಶದಿಂದ ಬರುವ ಕಾರ್ಮಿಕರ ದಾಖಲೆ ಪರಿಶೀಲಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ರಾಜತಾಂತ್ರಿಕತೆ ಉಳಿಸಿಕೊಳ್ಳದ ಬಾಂಗ್ಲಾ ಆರ್ಥಿಕವಾಗಿ ದಿವಾಳಿಯಾಗಿದೆ. ಅದನ್ನು ಸರಿಪಡಿಸುವ ಬದಲು ಹಿಂದೂಗಳ ಮೇಲಿನ ದೌರ್ಜನ್ಯ ಸರಿಯಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ದೊರೆಯುತ್ತಿದೆ. ಬೇರೆ ಕಡೆ ನೆಲೆಸಿರುವ ಭಾರತೀಯರಿಗೆ ರಕ್ಷಣೆ ಇಲ್ಲದಾಗಿದೆ. ಭಾರತವೂ ಇದಕ್ಕೆ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಕವನ್ ಕಾವೇರಪ್ಪ, ಉಪಾಧ್ಯಕ್ಷರುಗಳಾದ ಕಾಂಗೀರ ಸತೀಶ್, ಮನು ಮಂಜುನಾಥ್, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಹಿಳಾ ಘಟಕದ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪಿ.ಎಂ. ರವಿ, ನಗರಸಭಾ ಸದಸ್ಯರುಗಳಾದ ಕೆ.ಎಸ್. ರಮೇಶ್, ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಸವಿತಾ ರಾಕೇಶ್, ಶ್ವೇತ ಪ್ರಶಾಂತ್, ಸಬಿತಾ, ಮಂಜುಳಾ ಮುರುಗ, (ಮೊದಲ ಪುಟದಿಂದ) ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನು, ಪಳೆಯಂಡ ರಾಬಿನ್ ದೇವಯ್ಯ, ಮುತ್ತಪ್ಪ, ಹಿತರಕ್ಷಣಾ ಸಮಿತಿಯ ಚೇತನ್ ಕುಮಾರ್, ಪುದಿಯೊಕ್ಕಡ ರಮೇಶ್, ಧನಂಜಯ ಅಗೋಳಿಕಜೆ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.