ಸೋಮವಾರಪೇಟೆ, ಆ. ೧೨: ನೆರೆಯ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯ ದುರ್ಲಾಬ ಪಡೆದ ಮತಾಂಧರು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಕಾಯಕರ್ತರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಬಾಂಗ್ಲಾದಲ್ಲಿನ ಹಿಂದೂಗಳನ್ನು ರಕ್ಷಣೆ ಮಾಡಬೇಕು. ಮತಾಂಧರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಧಾಳಿ ನಡೆಯುತ್ತಿದ್ದರೂ ಜಾತ್ಯಾತೀತರ ಸೋಗಿನಲ್ಲಿರುವ ವ್ಯಕ್ತಿಗಳು ತುಟಿಬಿಚ್ಚುತ್ತಿಲ್ಲ. ಇಲ್ಲಿನ ಅಲ್ಪಸಂಖ್ಯಾತರ ಓಟ್ ಬ್ಯಾಂಕ್‌ಗಾಗಿ ರಾಜಕಾರಣ ಮಾಡುವುದನ್ನು ತಕ್ಷಣ ನಿಲ್ಲಿಸಿ ಇಡೀ ಹಿಂದೂ ಸಮಾಜ ಅಲ್ಲಿನ ಹಿಂದೂಗಳ ಪರವಾಗಿ ನಿಲ್ಲಬೇಕಿದೆ ಎಂದು ಪ್ರಮುಖರು ಆಗ್ರಹಿಸಿದರು.

ಬಾಂಗ್ಲಾದಲ್ಲಿ ಹಿಂದೂಗಳು, ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಧಾಳಿ ನಡೆಸಲಾಗುತ್ತಿದೆ. ಹೀಗಿದ್ದರೂ ವಿಶ್ವಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿಲ್ಲ. ಹಿಂದೂ ಸಮಾಜ ಇನ್ನೂ ನಿದ್ರಾವಸ್ಥೆಯಲ್ಲಿದ್ದರೆ ಅಪಾಯ ಖಚಿತ ಎಂದು ಪ್ರತಿಭಟನೆಯಲ್ಲಿದ್ದ ಪ್ರಮುಖರಾದ ಬೋಜೇಗೌಡ ಹೇಳಿದರು.

ಈ ಸಂದರ್ಭ ಹಿಂದೂ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಎಸ್.ಜಿ. ಮೇದಪ್ಪ, ಮಹೇಶ್ ತಿಮ್ಮಯ್ಯ, ಮನುಕುಮಾರ್ ರೈ, ಎಂ.ಬಿ. ಉಮೇಶ್, ಬಿ.ಜೆ. ದೀಪಕ್, ಪವನ್ ಹೊಸಬೀಡು, ದರ್ಶನ್ ಜೋಯಪ್ಪ, ಮಲ್ಲಾಜಿರ ಪ್ರವೀಣ್, ರೂಪಾ ಸತೀಶ್, ದೀಪಕ್, ಪರಮೇಶ್ ಕೂತಿ, ರವಿಕುಮಾರ್, ಕುಂದಳ್ಳಿ ದಿನೇಶ್, ಶ್ರೀನಿಧಿ ಲಿಂಗಪ್ಪ, ಇಂದಿರಾ ಸಾಲಿಯಾನ್, ಕವಿತಾ ವಿರೂಪಾಕ್ಷ, ತಂಗಮ್ಮ, ಜೀವನ್, ಟಿ.ಕೆ. ರಮೇಶ್, ಪಿ.ಕೆ. ಚಂದ್ರು ಸೇರಿದಂತೆ ಇತರರು ಭಾಗವಹಿಸಿದ್ದರು.