ಕಡಂಗ, ಆ. ೧೨: ಕಡಂಗ ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವತಿಯಿಂದ ಜಂಟಿ ಸಭೆಯನ್ನು ಕಡಂಗದ ಶಾದಿ ಮಹಲ್ನಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದ್ದರು. ಸಭೆಯಲ್ಲಿ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ವ್ಯಕ್ತಪಡಿಸಿದರು. ಪ್ರಮುಖವಾಗಿ ವಾಹನಗಳ ನಿಲುಗಡೆ ವಿಷಯವಾಗಿ ಚರ್ಚೆ ನಡೆಯಿತು. ಪ್ರತಿ ಅಂಗಡಿ ಮುಂದೆ ವಾಹನ ನಿಲ್ಲಿಸಿ ವ್ಯಾಪಾರಕ್ಕೆ ತೊಡಕು ಉಂಟಾಗುವುದನ್ನು ತಡೆಗಟ್ಟುವ ಬಗ್ಗೆ ಚರ್ಚೆ ನಡೆಯಿತು. ರಾತ್ರಿ ಸಮಯದ ಆಟೋ ಬಾಡಿಗೆ ಕರೆದರೂ ಆಟೋ ಚಾಲಕರು ಸಹಕರಿಸದೆ ಇರುವುದರ ಬಗ್ಗೆ ಸಾರ್ವಜನಿಕರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಚೋಳಂಡ ಸುಗುಣ ಅವರು ಮಾತನಾಡಿ, ಒಂದು ವಾರದ ಒಳಗೆ ಆಟೋ ಚಾಲಕರ ಸಭೆ ನಡೆಸಿ ಸಮಸ್ಯೆಗಳನ್ನು ನಿವಾರಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಆಟೋ ನಿಲ್ದಾಣದ ಸ್ಥಳ ನಿಗದಿಪಡಿಸಬೇಕಾಗಿ ಸಾರ್ವಜನಿಕರು ವಿನಂತಿಸಿಕೊAಡರು. ಅದೇ ರೀತಿ ಸಾರ್ವಜನಿಕ ಶೌಚಾಲಯ ಕಡಂಗ ಪಟ್ಟಣದಲ್ಲಿ ನಿರ್ಮಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಪಟ್ಟಣದ ಪಶುವೈದ್ಯ ಶಾಲಾ ಸಮೀಪದಲ್ಲಿ ಅಥವಾ ಸರಕಾರಿ ಕಟ್ಟಡದಲ್ಲಿ ನಿರ್ಮಿಸಲಾಗುವುದೆಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೋಡಿರ ಪ್ರಸನ್ನ ತಮ್ಮಯ್ಯ ಅವರು ಮಾತನಾಡಿ, ಕಸ ವಿಲೇವಾರಿ ಎಲ್ಲಾ ಕಡೆ ದೊಡ್ಡ ಸಮಸ್ಯೆಯಾಗಿದ್ದು, ನಮ್ಮ ಪಟ್ಟಣದಲ್ಲೂ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ಮನೆಯ ಹಸಿ ಕಸವನ್ನು ಅವರವರೇ ಕಾಂಪೋಸ್ಟ್ ಮಾಡೋದು ಹಾಗೂ ಒಣ ಕಸವನ್ನು ಬೇರ್ಪಡಿಸಿ ಅವರೇ ವಿಲೇವಾರಿ ಮಾಡಿದರೆ ಕಸದ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ಮಾತನಾಡಿ, ಘನ ತ್ಯಾಜ್ಯ ಘಟಕದ ಕಾಮಗಾರಿಯು ಪ್ರಾರಂಭವಾಗಿದ್ದು, ಕಸ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಯ ಅಧೀನದಲ್ಲಿ ಸಂಜೀವಿನಿ ಒಕ್ಕೂಟದವರು ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಪ್ರಮುಖವಾಗಿ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ ಎಂದು ವೀರಾಜಪೇಟೆ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸಿ.ಸಿ. ತಿಳಿಸಿದ ಮೇರೆಗೆ ಪಂಚಾಯಿತಿ ವತಿಯಿಂದ ತಾ. ೧೫ ರೊಳಗೆ ಕಡಂಗದ ಎಲ್ಲಾ ಕಡೆಗಳಲ್ಲೂ ವಾಹನ ನಿಲುಗಡೆ ಸೂಚನಾ ಫಲಕವನ್ನು ಅಳವಡಿಸಲಾಗುವುದು ಎಂದು ಸದಸ್ಯರು ತಿಳಿಸಿದರು.
ನಿಯಮ ಉಲ್ಲಂಘಿಸಿದಲ್ಲಿ ಪೊಲೀಸ್ ಇಲಾಖೆಯಿಂದ ವಾಹನ ಲಾಕ್ ಮಾಡಲಾಗುವುದು. ತದನಂತರ ದಂಡ ಕಟ್ಟಿ ಬಿಡುಗಡೆಗೊಳಿಸಬೇಕಾಗುತ್ತದೆ ಎಂದು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸಿ.ಸಿ. ಎಚ್ಚರಿಸಿದರು.
ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಮಾತನಾಡಿ, ವಿದ್ಯುತ್ ಸಂಪರ್ಕ ಕಡಿತವಾಗಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಸುಬಿರ್ ಸಿ.ಇ. ಮಾತನಾಡಿ, ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯುತ್ಛಕ್ತಿ ಇಲಾಖೆಗೂ ಹಾಗೂ ಶಾಸಕರಿಗೆ ಮನವಿ ನೀಡಿದಾಗ ಅದಕ್ಕೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ಇತ್ತಿದ್ದಾರೆ ಎಂದು ತಿಳಿಸಿದರು.
ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹಮಾನ್ ಮಾತನಾಡಿ, ಕಡಂಗದಲ್ಲಿ ಗಾಂಜಾ ಸೇವನೆ, ಮಾರಾಟ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆಯು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಿಡಿಓ ಆಶಾಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡAಡ ರಾಣಿ ಗಣಪತಿ, ವಾಣಿ, ಮೊಹಮ್ಮದ್, ವೀರಾಜಪೇಟೆ ಪೊಲೀಸ್ ಠಾಣಾ ಅಧಿಕಾರಿ ಮಂಜುನಾಥ್ ಸಿ.ಸಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳಯ್ಯ, ಸುಗುಣ, ಪಂಚಾಯಿತಿ ಸಿಬ್ಬಂದಿ ದಿನೇಶ್ ಕುಮಾರ್, ಮಾಜಿ ಸದಸ್ಯರಾದ ಪ್ರಕಾಶ್, ಇಬ್ರಾಹಿಂ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.