ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಆ. ೧೨ : ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಾಫಿ ಇನ್ನಿತರೆ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ಕಂದಾಯ ಭೂಮಿಯನ್ನು ಗುತ್ತಿಗೆ ನೀಡುವ ಸರ್ಕಾರದ ತೀರ್ಮಾನವನ್ನು ಅನುಷ್ಠಾನ ಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಓತ್ತುವರಿದಾರರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಸಿ ಎನ್ ಮೀನಾ ನಾಗರಾಜ್ ಅವರು ಗುರುವಾರ ಪ್ರಕಟಣೆ ಹೊರಡಿಸಿದ್ದಾರೆ. ಈ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ಅವರು ಗುತ್ತಿಗೆ ಪಡೆಯಬಯಸುವ ಒತ್ತುವರಿದಾರರಿಗೆ ಅರ್ಜಿಗಳನ್ನು ಸಲ್ಲಿಸಲು ೯೦ ದಿನಗಳ ಕಾಲಾವಕಾಶ ನೀಡಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ಒಟ್ಟು ೭೬,೮೪೪ ಎಕರೆ ಭುಮಿಯನ್ನು ಒತ್ತುವರಿ ಮಾಡಿಕೊಂಡು ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಹಾಸನ ಜಿಲ್ಲೆಯಲ್ಲಿ ೨೯,೩೪೮ ಎಕರೆ ಕೊಡಗು ೨೬,೨೫೦, ಚಿಕ್ಕಮಗಳೂರಿನಲ್ಲಿ ೨೦,೮೪೪ ಉಡುಪಿಯಲ್ಲಿ ೩೯೮ ಎಕರೆ ಸೇರಿದ್ದು ರೈತರು ಅನಧಿಕೃತ ಸಾಗುವಳಿಯನ್ನು ಮಾಡುತ್ತಿದ್ದಾರೆ. ಅವರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ೧.೧.೨೦೦೫ ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಜಮೀನನ್ನು ಗುತ್ತಿಗೆ ನೀಡುವ ಬಗ್ಗೆ ನಿಗದಿತ ನಮೂನೆ ೯ರಲ್ಲಿ ಅರ್ಜಿಯನ್ನು ತಹಶೀಲ್ದಾರ್ ಅವರ ಕಚೇರಿಗೆ

(ಮೊದಲ ಪುಟದಿಂದ) ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸಂಪರ್ಕಿಸಿದಾಗ ತಾವು ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದರಲ್ಲದೆ, ರಾಜ್ಯ ಸರ್ಕಾರವೇ ಬೆಂಗಳೂರಿನಲ್ಲಿ ಪ್ರಕಟಣೆ ಹೊರಡಿಸಿದ್ದು ಇದು ಇಡೀ ರಾಜ್ಯಕ್ಕೆ ಅನ್ವಯ ಆಗುತ್ತದೆ ಎಂದು ಹೇಳಿದರು. ಕೊಡಗಿನಲ್ಲಿ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆ ಆಗಿಲ್ಲ ಎಂದೂ ತಿಳಿಸಿದರು.

ಈ ಒತ್ತುವರಿ ಮಾಡಿಕೊಂಡಿರುವವರಲ್ಲಿ ಶೇಕಡಾ ೯೫ ರಷ್ಟು ರೈತರು ಐದು ಎಕರೆ ಭೂಮಿಯೊಳಗೆ ಒತ್ತುವರಿ ಮಾಡಿಕೊಂಡಿದ್ದು ಒತ್ತುವರಿ ಭೂಮಿಯನ್ನು ಸಕ್ರಮ ಮಾಡಿಕೊಡಲು ಸರ್ಕಾರದ ಮೇಲೆ ದಶಕಗಳಿಂದಲೇ ಒತ್ತಡ ಹೇರುತ್ತಿದ್ದರು. ಆದರೂ ಸರ್ಕಾರ ಅರ್ಜಿ ಜೊತೆಗೆ ಕೇಳಿರುವ ದಾಖಲೆಗಳನ್ನು ಒದಗಿಸಲು ಒತ್ತುವರಿದಾರರಿಗೆ ಸಾಧ್ಯವಾಗುವು ದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಒತ್ತುವರಿದಾರರಿಗೆ ಇದರ ಲಾಭ ಸಿಗುವುದಿಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಅಂದಿನ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಚಿಕ್ಕಮಗಳೂರಿಗೆ ಬಂದು ಬೆಳೆಗಾರರ ಜೊತೆ ಸಮಾಲೋಚನೆ ನಡೆಸಿ ಒತ್ತುವರಿ ಭೂಮಿ ಲೀಸ್‌ಗೆ ನೀಡಲು ಸರಳವಾದ ನಿಯಮಾವಳಿಗಳನ್ನೂ ರೂಪಿಸಿ ಅಂದಿನ ಸರ್ಕಾರದ ಒಪ್ಪಿಗೆಯನ್ನೂ ಪಡೆದಿದ್ದರು. ಬೆಳೆಗಾರ ಸಂಘಟನೆ ಕೆಜಿಎಫ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು ಇದರಿಂದ ಸಾವಿರಾರು ಕಾಫಿ ಬೆಳೆಗಾರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.