ಮುಳ್ಳೂರು, ಆ. ೧೧: ಮಕ್ಕಳಿಗೆ ಕೃಷಿ ಮತ್ತು ರೈತ ಜೀವನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ವತಿಯಿಂದ ರೈತರೊಬ್ಬರ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶಾಲೆಯ ಪಕ್ಕದಲ್ಲಿರುವ ಮೂದರವಳ್ಳಿ ಗ್ರಾಮದ ರೈತ ದಿಲೀಪ್ ಎಂಬವರ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಶಾಲೆಯ ೪ ರಿಂದ ೧೦ನೇ ತರಗತಿ ವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಲಾಯಿತು. ರೈತ ದಿಲೀಪ್ ತಮ್ಮ ಗದ್ದೆಯಲ್ಲಿ ವಿ.ಎಂ. ಪ್ಲಸ್ ಹೈಬ್ರೀಡ್ ತಳಿಯ ಭತ್ತದ ಸಸಿಯನ್ನು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯವರು ತಮ್ಮ ಶಾಲೆಯ ಮಕ್ಕಳಿಗೆ ವ್ಯಸಹಾಯದ ಬಗ್ಗೆ ಭತ್ತ ನಾಟಿ ಮಾಡುವ ವಿಧಾನದ ಬಗ್ಗೆ ತಿಳಿಸಿಕೊಡಲು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗದ್ದೆಯ ಮಾಲೀಕ ದಿಲೀಪ್ ಅವರು ವಿದ್ಯಾರ್ಥಿಗಳೆ ಭತ್ತ ನಾಟಿ ಮಾಡಲು ಎರಡು ಗದ್ದೆಯನ್ನು ಕಾಯ್ದಿರಿಸಿದ್ದರು ನಂತರ ದಿಲೀಪ್ ವಿದ್ಯಾರ್ಥಿಗಳಿಗೆ ಭತ್ತದ ಸಸಿಯನ್ನು ಹೇಗೆ ನಾಟಿ ಮಾಡುವುದು, ಭತ್ತದ ತಳಿಯ ಹೆಸರು, ಭತ್ತದ ಸಸಿಯನ್ನು ನಾಟಿ ಮಾಡಿ ಎಷ್ಟು ದಿನದಲ್ಲಿ ಫಸಲಿಗೆ ಬಂದ ಭತ್ತವನ್ನು ಕಟಾವು ಮಾಡಲಾಗುತ್ತದೆ ಒಂದು ಎಕರೆಗೆ ಭತ್ತ ಎಷ್ಟು ಇಳುವರಿ ಕೊಡುತ್ತದೆ ಗೊಬ್ಬರ ಹಾಕುವುದು, ಕೀಟ ನಾಶಕ ಔಷಧಿ ಸಿಂಪಡಣೆ ಸೇರಿದಂತೆ ಭತ್ತದ ಬೇಸಾಯದ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹೇಳುತ್ತಾ ನಾಟಿ ಮಾಡುವುದನ್ನು ಕಲಿಸಿಕೊಟ್ಟರು. ವಿದ್ಯಾರ್ಥಿಗಳು ಭತ್ತ ನಾಟಿಯನ್ನು ಮಾಡಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳ ಜೊತೆಯಲ್ಲಿ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ ಸೇರಿದಂತೆ ಶಾಲಾ ಶಿಕ್ಷಕರು ಸಹ ನಾಟಿ ಮಾಡಿದರು.