ಮಡಿಕೇರಿ, ಆ. ೧೦: ವಿಶಾಲ ಗದ್ದೆಯಲ್ಲಿ ಎದ್ದು-ಬಿದ್ದು ಓಡಿದ ಓಟಗಾರರು, ಕೆಸರಲ್ಲಿ ಹಗ್ಗಜಗ್ಗಾಡಿ ಶಕ್ತಿ ಪ್ರದರ್ಶನಗೈದ ಕ್ರೀಡಾಪಟುಗಳು, ನಾವ್ಯಾರಿಗೆ ಕಮ್ಮಿ ಎಂದು ಪಂದ್ಯಾಟದಲ್ಲಿ ಭಾಗಿಯಾದ ಮಹಿಳೆಯರು, ಮೊಬೈಲ್ ಗೇಮ್ ದೂರವಿಟ್ಟು ಕೆಸರಿನೋಕುಳಿಯಲ್ಲಿ ಮಿಂದೆದ್ದ ಮಕ್ಕಳು..
ಕ್ರೀಡಾ ತವರೂರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಹಾಕಿ, ಫುಟ್ಬಾಲ್, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಇನ್ನಿತರ ಪಂದ್ಯಾಟಗಳು ನಡೆಯುವುದು ಸಹಜ. ಅದೇ ರೀತಿ ಮಳೆಗಾಲದಲ್ಲೂ ಆಯೋಜನೆಗೊಳ್ಳುವ ವಿಭಿನ್ನ ಆಟೋಟಗಳು ಜನಮನ ಆಕರ್ಷಿಸುತ್ತವೆ. ಮಳೆಗಾಲದ ವೈಭವಕ್ಕೆ ಕನ್ನಡಿ ಹಿಡಿಯುವ ಕೆಸರು ಗದ್ದೆ ಕ್ರೀಡಾಕೂಟಗಳು ಜನಪ್ರಿಯತೆ ಗಳಿಸಿಕೊಂಡಿವೆ. ಕಳೆದ ೩೨ ವರ್ಷಗಳಿಂದ ಕಗ್ಗೋಡ್ಲು ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ಕೆಸರು ಗದ್ದೆ ಕ್ರೀಡಾಕೂಟ ಈ ಬಾರಿಯೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ೩೨ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಸಂಭ್ರಮಕ್ಕೆ ಸಾಕ್ಷಿಯಾದರು.
ಜಿಲ್ಲೆಯ ವಿವಿಧ ಗ್ರಾಮಗಳ ಕ್ರೀಡಾ ತಂಡಗಳು, ಯುವ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೊತೆಗೆ ದಕ್ಷಿಣ ಕನ್ನಡ ಭಾಗದ ಕೆಲ ತಂಡಗಳು ಪಾಲ್ಗೊಂಡು ಪೈಪೋಟಿ ನೀಡಿದವು.
ಮೈನವಿರೇಳಿಸಿದ ಆಟೋಟಗಳು
ಕೆಸರು ಗದ್ದೆಯಲ್ಲಿ ನಡೆದ ವೈವಿಧ್ಯಮಯ ಆಟೋಟಗಳು ಮೈನವಿರೇಳಿಸಿದವು. ಪುರುಷರ ಹಾಗೂ ಮಹಿಳೆಯರ ವಿಭಾಗಕ್ಕೆ ನಡೆದ ಹಗ್ಗಜಗ್ಗಾಟ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಪುರುಷರ ತಂಡಗಳು ಶಕ್ತಿ ಪ್ರದರ್ಶನ ಮಾಡಿದರೆ, ಮಹಿಳೆಯರು ಕೂಡ ಕೆಸರಿನ ಮಧ್ಯೆ ಹಗ್ಗ ಜಗ್ಗಾಡಿ ಸೈ ಎನಿಸಿಕೊಂಡರು. ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರು ಹಗ್ಗಜಗ್ಗಾಟದಲ್ಲಿ ಪೈಪೋಟಿ ನೀಡಿದರು.
ಪುರುಷರ ಹಗ್ಗಜಗ್ಗಾಟವಂತೂ ಕೊನೆಘಳಿಗೆಯ ತನಕ ಗೆಲುವು ಯಾರಿಗೆ ಎಂಬ ಕುತೂಹಲವನ್ನು ಸೃಷ್ಟಿಸಿತು. ಬಲಶಾಲಿಗಳು ಕೆಸರಿನ ಅಂಕಣದಲ್ಲಿ ಹಗ್ಗ ಜಾರದಂತೆ ನೈಪುಣ್ಯತೆಯಿಂದ ಹಿಡಿದು ನಿಂತು ಶಕ್ತಿ ಪ್ರದರ್ಶನ ಮಾಡಿದರು.
ಪುರುಷರ, ಬಾಲಕರ ತಂಡಗಳು ವಾಲಿಬಾಲ್ ಪಂದ್ಯಾಟದಲ್ಲಿ ಸೆಣಸಾಡಿದವು. ಮಹಿಳೆಯರು, ಪ್ರೌಢಶಾಲಾ ಬಾಲಕಿಯರು ಕೆಸರಿನ ನಡುವೆ ಥ್ರೋಬಾಲ್ ಆಡಿ ವಿನೂತನ ಅನುಭವ ಪಡೆದರು. ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ ೫೦ ಮೀಟರ್ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ ೧೦೦ ಮೀಟರ್ ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ೨೦೦ ಮೀಟರ್ ಓಟ, ಪದವಿ ಪೂರ್ವ, ಪದವಿ ಕಾಲೇಜು ಬಾಲಕ, ಬಾಲಕಿಯರಿಗೆ ೪೦೦ ಮೀಟರ್ ಓಟ, ಸಾರ್ವಜನಿಕ ವಿಭಾಗದ ಪುರುಷ, ಮಹಿಳೆಯರು ೨೦೦ ಮೀಟರ್ ಓಟ ಸ್ಪರ್ಧೆ ರೋಮಾಂಚನ ಗೊಳಿಸಿತು. ಕೆಸರಿನೋಕುಳಿ ನಡುವೆ ತಾ ಮುಂದು ನಾ ಮುಂದು ಎಂದು ಓಟಗಾರರು ಓಡಿದರು. ನೋಡುಗರು ಶಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದರು. ಕಗ್ಗೋಡ್ಲು ಗ್ರಾಮಸ್ಥರಿಗಾಗಿ ಏರ್ಪಡಿಸಿದ್ದ ಸಾಂಪ್ರದಾಯಿಕ ನಾಟಿ ಓಟ ಸ್ಪರ್ಧೆಯೂ ವಿಶೇಷತೆಗೆ ಕಾರಣವಾಯಿತು.
(ಮೊದಲ ಪುಟದಿಂದ)
ಕೆಸರಿನಲ್ಲಿ ಮಿಂದೆದ್ದ ಚಿಣ್ಣರು
ಕೆಸರಿನೋಕುಳಿಯಲ್ಲಿ ಚಿಣ್ಣರು ಮಿಂದೇಳುವ ಮೂಲಕ ಗದ್ದೆಯ ಓಡಾಟದ ಅನುಭವ ಪಡೆದರು. ಓಟ, ಆಟ ಮುಗಿಸಿದರೂ ಕೆಸರಿನಲ್ಲಿಯೇ ಕಾಲ ಕಳೆದರು. ತಮ್ಮ ಸ್ನೇಹಿತರೊಡನೆ ಕೆಸರಿನಲ್ಲಿ ಓಡಿ, ಬಿದ್ದು ಸಂತಸ ಅನುಭವಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಉದ್ಘಾಟನಾ ಕಾರ್ಯಕ್ರಮ
ಕೆಸರು ಗದ್ದೆ ಕ್ರೀಡಾಕೂಟವನ್ನು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ನೆಹರು ಯುವ ಕೇಂದ್ರದ ತಾಲೂಕು ಅಧಿಕಾರಿ ಕೆ.ಟಿ. ಉಲ್ಲಾಸ್ ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕೆ.ಟಿ. ಉಲ್ಲಾಸ್, ೩೨ ವರ್ಷಗಳಿಂದ ಗ್ರಾಮೀಣ ಕ್ರೀಡಾಕೂಟವನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ. ಇಂತಹ ಕ್ರೀಡಾಕೂಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ವಿಸ್ಮಯಿ ಚಕ್ರವರ್ತಿ ಮಾತನಾಡಿ, ೩೨ ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಇಲಾಖೆಯಿಂದ ಪೂರಕ ಸಹಕಾರ ನೀಡಲಾಗುತ್ತದೆ. ಯುವಕ ಸಂಘದವರು ಶ್ರಮವಹಿಸಿ ಕ್ರೀಡಾಕೂಟ ಯಶಸ್ವಿಗೆ ಕೆಲಸ ಮಾಡುತ್ತಿದ್ದಾರೆ. ಕೆಸರು ಗದ್ದೆ ಕ್ರೀಡಾಕೂಟ ಈ ಭಾಗದ ಸಂಸ್ಕೃತಿಯಾಗಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಇಂದಿಗೂ ಆಯೋಜನೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಒಕ್ಕೂಟ ಮಡಿಕೇರಿ ತಾಲೂಕು ಅಧ್ಯಕ್ಷ ಬಾಲಾಡಿ ದಿಲೀಪ್ ಕುಮಾರ್, ಹಾಕತ್ತೂರು ಗ್ರಾ.ಪಂ. ಸದಸ್ಯ ಪೊನ್ನಚ್ಚನ ಲೋಕೇಶ್, ಕಾವೇರಿ ಯುವಕ ಸಂಘ ಅಧ್ಯಕ್ಷ ಮಂದ್ರೀರ ಸಚಿನ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಹಾಯಕ ನಿರೀಕ್ಷಕರುಗಳಾದ ಉತ್ತಪ್ಪ, ಫ್ರಾನ್ಸಿಸ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕದ ಅಧ್ಯಕ್ಷ ಎ.ಎ. ಅಯ್ಯಣ್ಣ, ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.
ಇಂದುಮತಿ ಪ್ರಾರ್ಥಿಸಿ, ಸಾಬ ಸುಬ್ರಮಣಿ ನಿರೂಪಿಸಿ, ನವೀನ್ ದೇರಳ ಸ್ವಾಗತಿಸಿ, ದಿಲೀಪ್ ಕುಮಾರ್ ವಂದಿಸಿದರು.
- ವರದಿ : ಹೆಚ್.ಜೆ. ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್