ಮಡಿಕೇರಿ, ಆ. ೧೦: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗೆ ಸಹಕಾರ ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಆಧುನಿಕ ಪಶುಪಾಲನೆ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಅವರು, ಪ್ರತಿಯೊಬ್ಬ ರೈತರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವಂತೆ ಕಾರ್ಯದರ್ಶಿಗಳು ಪ್ರೋತ್ಸಾಹಿಸಿ, ರೈತರಿಗೆ ತಿಳುವಳಿಕೆ ನೀಡಬೇಕು. ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದೆ. ‘ಅಮೂಲ್’ನಂತಹ ಸಂಸ್ಥೆಗೆ ಪೈಪೋಟಿಯನ್ನು ‘ನಂದಿನಿ’ ನೀಡುತ್ತಿದೆ. ‘ಅಮೂಲ್’ ರೀತಿಯಲ್ಲಿ ‘ನಂದಿನಿ’ ಉತ್ಪನ್ನವು ಉತ್ತುಂಗಕ್ಕೇರಬೇಕು. ಈ ದಿಸೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದೆ. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ವರ್ಷಂಪ್ರತೀ ಇಂತಹ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ನೀಡುವ ಉಪಯುಕ್ತ ಸಲಹೆಗಳನ್ನು ಸ್ವೀಕರಿಸಿ ಅಳವಡಿಸಿಕೊಂಡು ಸಂಘವನ್ನು ಮುನ್ನಡೆಸಬೇಕೆಂದು ಕಿವಿಮಾತು ಹೇಳಿದರು. ಅಲ್ಲದೆ ಕೊಡಗು ಜಿಲ್ಲೆಯನ್ನು ಕೇವಲ ಹಾಲಿನ ಮಾರಾಟಕ್ಕಾಗಿ ಮಾತ್ರ ಪರಿಗಣಿಸದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಘಗಳನ್ನು ಸ್ಥಾಪನೆ ಮಾಡಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎನ್.ಎಂ. ಉಮೇಶ್ ಉತ್ತಪ್ಪ ಅವರು ಮಾತನಾಡಿ, ನಂದಿನಿ ಹಾಲು ಹಾಗೂ ಅದರ ಉತ್ಪನ್ನದ ಮಾರಾಟವನ್ನು ಪ್ರತಿ ಹಳ್ಳಿಗಳಿಗೂ ವಿಸ್ತರಿಸಬೇಕು ಹಾಗೂ ವಿವಿಧ ರೀತಿಯ ಉತ್ಪನ್ನಗಳು ಕೊಡಗು ಜಿಲ್ಲೆಯಲ್ಲಿ ದೊರಕುವಂತಾಗಬೇಕೆAದು ತಿಳಿಸುತ್ತಾ ಪ್ರತಿಯೊಬ್ಬರು ಇಂತಹ ಶಿಕ್ಷಣ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಪಿ.ಬಿ. ಯತೀಶ್ ಉಪಸ್ಥಿತರಿದ್ದರು.
ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಹಾಲಿನ ಗುಣಮಟ್ಟ ಮತ್ತು ಇತರೆ ವಿಷಯಗಳ ಕುರಿತು ಹಾಸನ ಹಾಲು ಒಕ್ಕೂಟದ ಶೇಖರಣೆ ವಿಭಾಗ ಪ್ರಧಾನ ವ್ಯವಸ್ಥಾಪಕ ಕೆ. ರೂಪೇಶ್ ಕುಮಾರ್ ಅವರು, ಆಧುನಿಕ ಪಶುಪಾಲನೆ, ಪಶುಗಳ ಆರೋಗ್ಯ, ಮೇವಿನ ನೀಡುವಿಕೆ, ಕರುಗಳ ಪಾಲನೆ ಪೋಷಣೆ ವಿಷಯಗಳ ಕುರಿತು ಹಾಸನ ಹಾಲು ಒಕ್ಕೂಟದ ಪಶು ಆರೋಗ್ಯ ವಿಭಾಗದ ವ್ಯವಸ್ಥಾಪಕ ಡಾ|| ಬಿ.ಎಲ್. ಪ್ರಸನ್ನ ಅವರು, ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ, ನಿಧಿಗಳ ಹಂಚಿಕೆ ಕುರಿತು ಸಹಕಾರ ಸಂಘಗಳ ನಿವೃತ್ತ ಹಿರಿಯ ಲೆಕ್ಕಪರಿಶೋಧಕ ಡಿ.ಎನ್. ಚಂದ್ರಶೇಖರ್, ಹಾಲು ಉತ್ಪಾದನೆಯಲ್ಲಿ ಸಂಘಗಳ ಪಾತ್ರ ಹಾಗೂ ಶೇಖರಣೆಯಲ್ಲಿರುವ ನ್ಯೂನತೆಗಳ ಕುರಿತು ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಪ್ರಾರ್ಥನೆ, ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರ್ವಹಿಸಿದರು.