ಪರಿಹಾರ, ಪುನರ್ವಸತಿಗೆ ಕೇಂದ್ರ ಸಂಪೂರ್ಣ ಬೆಂಬಲ: ಮೋದಿ
ಕಲ್ಪೆಟ್ಟ, ಆ. ೧೦: ಕೇರಳದ ವಯನಾಡು ಜಿಲ್ಲೆಯ ಚೂರಲ್ಮಲ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬದುಕುಳಿದವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಹಣದ ಸಮಸ್ಯೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ಭೀಕರ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಮೋದಿ, ರಾಜ್ಯ ಸರ್ಕಾರದಿಂದ ಹಾನಿಯ ಕುರಿತು ವಿವರವಾದ ವರದಿ ನೀಡುವಂತೆ ಕೋರಿದ್ದೇನೆ. ನಮಗೆ ವರದಿ ಬಂದ ನಂತರ ಸರ್ಕಾರ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಪುನರ್ವಸತಿ ಪ್ಯಾಕೇಜ್ಗೆ ರಾಜ್ಯ ಮತ್ತು ಕೇಂದ್ರ ಎರಡೂ ಕೈಜೋಡಿಸಲಿವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಕಾಂಗ್ರೆಸ್ನ ಎಲ್ಲಾ ೯೯ ಸಂಸದರಿಗೆ ಅನರ್ಹತೆ ಭೀತಿ!?
ಪ್ರಯಾಗ್ರಾಜ್, ಆ. ೧೦: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಘರ್ ಘರ್ ಗ್ಯಾರೆಂಟಿ ಭರವಸೆಗಳು ಕಾನೂನಿನ ಪ್ರಕಾರ ಲಂಚದ ಆಮಿಷವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ೯೯ ಸಂಸದರನ್ನು ಅನರ್ಹಗೊಳಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಪಿಐಎಲ್ನಲ್ಲಿ ಚುನಾವಣಾ ಆಯೋಗದ ವಿರುದ್ಧವೂ ನಿರ್ದೇಶನಕ್ಕೆ ಮನವಿ ಮಾಡ ಲಾಗಿದ್ದು, ಕಾಂಗ್ರೆಸ್ನ ಗ್ಯಾರೆಂಟಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಯೋಗದ ವಿರುದ್ಧ ಆರೋಪಿಸಲಾಗಿದೆ. ಈ ವರ್ಷ ಮೇ ೨ ರಂದು ಆಯೋಗ, ಈ ರೀತಿಯ ಭರವಸೆಗಳನ್ನು ನೀಡುವುದರ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿತ್ತಾದರೂ, ಕಾಂಗ್ರೆಸ್ ಪಕ್ಷ ನಿಯಮಗಳನ್ನು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆಯನ್ನು ರಾಜಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಗ್ಯಾರೆಂಟಿ ಕಾರ್ಡ್ಗಳ ವಿತರಣೆಯಲ್ಲಿ ತೊಡಗಿತ್ತು ಎಂದು ಪಿಐಎಲ್ ಆರೋಪಿಸಿದೆ.
ಕಾಶ್ಮೀರ: ಎನ್ಕೌಂಟರ್ನಲ್ಲಿ ಇಬ್ಬರು ಯೋಧರು ಹುತಾತ್ಮ
ಅನಂತನಾಗ್, ಆ. ೧೦: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಅರಣ್ಯ ಪ್ರದೇಶದ ಶನಿವಾರ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಕೊಕರ್ನಾಗ್ ಪ್ರದೇಶದ ಅಹ್ಲಾನ್ ಗಗರ್ಮಂಡು ಅರಣ್ಯದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿದೆ ಎಂದು ಅವರು ಹೇಳಿದ್ದಾರೆ. ಅರಣ್ಯದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನಾ ಸಿಬ್ಬಂದಿಯನ್ನು ಗಮನಿಸಿ ಮನಬಂದAತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.