ಪೊನ್ನಂಪೇಟೆ, ಆ. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಟೀವಾಡದ ಕೊರಕುಟ್ಟಿರ ರಾಜಪ್ಪ ಅವರ ಗದ್ದೆಯಲ್ಲಿ ಗ್ರಾಮ ವಿಕಾಸ್ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಗ್ರಾಮ ವಿಕಾಸ್ ಸಂಯೋಜಕ ಚೆಪ್ಪುಡಿರ ಸುನೀಲ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕೊರಕುಟ್ಟಿರ ರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊರಕುಟ್ಟಿರ ಸರ ಚಂಗಪ್ಪ ಉದ್ಘಾಟಿಸಿದರು. ಚೆಂಡು ಎಸೆಯುವುದರ ಮೂಲಕ ಪೊಕ್ಕಳಿಚಂಡ ಜಾನಕಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸರ ಚಂಗಪ್ಪ ಅವರು ಮಾತನಾಡಿ, ಗ್ರಾಮ ವಿಕಾಸ್ ಯೋಜನೆಯಡಿಯಲ್ಲಿ ಬಹಳ ಅಚ್ಚುಕಟ್ಟಾಗಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿದ ಆಯೋಜಕರ ಶ್ರಮವನ್ನು ಶ್ಲಾಘಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿ ಪೊಕ್ಕಳಿಚಂಡ ಪೂಣಚ್ಚ ಮಾತನಾಡಿ, ಹಿಂದಿನ ಕಾಲದಲ್ಲಿ ನಾಟಿ ಓಟದ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಸರಕಾರದ ಯೋಜನೆಗಳ ಅಡಿಯಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಗ್ರಾಮ ವಿಕಾಸ್ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪಾರಿತೋಷಕಗಳ ಬದಲು, ಸೀಬೆ ಹಣ್ಣಿನ ಗಿಡ ಹಾಗೂ ಲಿಚ್ಚಿ ಹಣ್ಣಿನ ಗಿಡಗಳನ್ನು ಬಹುಮಾನ ನೀಡಿದ್ದು ವಿಶೇಷವಾಗಿತ್ತು. ಇದೇ ಸಂದರ್ಭ ಕಾರಣಿ ಹಾಗೂ ಪಂಜರಿ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಆದಾಗ ಗ್ರಾಮಸ್ಥರ ದೂರವಾಣಿ ಕರೆಗೆ ಕೂಡಲೇ ಸ್ಪಂದನ ನೀಡಿ ಚೆಸ್ಕಾಂ ಇಲಾಖೆಯವರೊಂದಿಗೆ ಕೈಜೋಡಿಸಿದ ಗ್ರಾಮಸ್ಥರಿಗೆ, ವಿದ್ಯುತ್ ಸಮಸ್ಯೆ ಆಗದ ರೀತಿ ಕಾರ್ಯನಿರ್ವಹಿಸುತ್ತಿರುವ ಪಿ. ಸುರೇಶ್ ಹಾಗೂ ಚಿರಿಯಪಂಡ ಜೋಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕಲಾವಿದ ಕಿರುಗೂರು ನವೀನ್ ಅವರ ಹಾಸ್ಯಭರಿತ ನಿರೂಪಣಾ ಶೈಲಿ ಕ್ರೀಡಾಭಿಮಾನಿಗಳನ್ನು ರಂಜಿಸಿತು.
ವಿಜೇತರು
೧೫ ವರ್ಷದೊಳಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಕೌಶಿಕ್ ಪ್ರಥಮ, ಮಹೇಶ್ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಪೌನಿ ಪ್ರಥಮ, ಸೋನಮ್ ಸೀತಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.
೧೦ ವರ್ಷದೊಳಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಡಿಲ್ಸನ್ ಪ್ರಥಮ, ಶರಣು ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಲಾವಣ್ಯ ಪ್ರಥಮ, ತಾನ್ಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಪುರುಷರ ಓಟದ ಸ್ಪರ್ಧೆಯಲ್ಲಿ ಸೋಮಣ್ಣ ಪ್ರಥಮ, ಸನ್ನಿ ದ್ವಿತೀಯ ಸ್ಥಾನ, ಮಹಿಳೆಯರ ಓಟದ ಸ್ಪರ್ಧೆಯಲ್ಲಿ ವಿನ್ಯಾ ಪ್ರಥಮ, ದೇಚಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.
೧೫ ವರ್ಷದೊಳಗಿನ ಬಾಲಕರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹಾಗೂ ಕಿರಗೂರು ಟೈಗರ್ಸ್ ಪ್ರಥಮ, ಮತ್ತೂರು ಬ್ಲಾಸ್ಟರ್ ದ್ವಿತೀಯ, ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಿರಗೂರು ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಬೀಟಿವಾಡ ತಂಡ ದ್ವಿತೀಯ ಸ್ಥಾನ ಪಡೆಯಿತು.
ಕಂಬ ಸುತ್ತಿ ಓಡುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನಾಗೇಶ್ ಪ್ರಥಮ ಹಾಗೂ ಬೋಪಣ್ಣ ಪಿ.ಜಿ. ದ್ವಿತೀಯ ಸ್ಥಾನ, ಮಹಿಳಾ ವಿಭಾಗದಲ್ಲಿ ಕಾವ್ಯ ಪ್ರಥಮ, ಶ್ರುತಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬಾಲಕರ ವಿಭಾಗದಲ್ಲಿ ಪೂಜಿತ್ ಪ್ರಥಮ, ಕೌಶಿಕ್ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಲಾವಣ್ಯ ಪ್ರಥಮ, ದೇಚಮ್ಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಹ್ಯಾAಡ್ ಬಾಲ್ ಸ್ಪರ್ಧೆಯ ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಿರಗೂರು ಟೈಗರ್ಸ್ ಪ್ರಥಮ, ಕಿರಗೂರು ಬ್ಲಾಸ್ಟರ್ಸ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಕುಟ್ಟಿಚಾತ ಮಹಿಳಾ ಮಂಡಳಿ ಪ್ರಥಮ, ಹ ಅಯ್ಯಪ್ಪ ಮಹಿಳಾ ಮಂಡಳಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಗ್ಗಜಗ್ಗಾಟ ಮಹಿಳೆಯರ ವಿಭಾಗದಲ್ಲಿ ಕುಟ್ಟಿಚಾತ ಮಹಿಳಾ ಮಂಡಳಿ ಪ್ರಥಮ, ಕಿರಗೂರು ಹಾಗೂ ಕೊರಗಜ್ಜ ಮಹಿಳಾ ಮಂಡಳಿ ಮತ್ತೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬೀಟಿವಾಡ ಯುವಕ ಮಂಡಳಿ ಪ್ರಥಮ, ವಿನಾಯಕ ಬಳಗ ಕಿರಗೂರು ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಾರಿಮಂಡ ದಿನು ದೇವಯ್ಯ ಅವರು, ಗ್ರಾಮ ವಿಕಾಸ್ ಯೋಜನೆಯಡಿ ಆಯೋಜಿಸಿರುವ ಕೆಸರುಗದ್ದೆ ಕ್ರೀಡಾಕೂಟವನ್ನು ಕೊಡಗಿನಲ್ಲಿ ‘ಪ್ರಕೃತಿ ನಮ್ಮೆ’ ಎಂದು ಕರೆಯಬಹುದು. ಅದ್ದೂರಿಯಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದಲ್ಲದೆ ವಿಜೇತರಾದವರಿಗೆ ವಿಶೇಷವಾಗಿ ಹಣ್ಣಿನ ಗಿಡಗಳನ್ನು ಬಹುಮಾನವಾಗಿ ನೀಡಿರುವುದು ಜಾಗತಿಕ ತಾಪಮಾನದಿಂದ ಬಳಲುತ್ತಿರುವ ಈ ಸಮಯದಲ್ಲಿ ಪರಿಸರದ ಬಗ್ಗೆ ಇರುವ ವಿಶೇಷವಾದ ಕಾಳಜಿಯನ್ನು ತೋರಿಸುತ್ತದೆ ಎಂದು ಆಯೋಜಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರುಗೂರು ನವೀನ್ ಅವರು ಮಾತನಾಡಿ ಕಳೆದ ಬಾರಿ ಗ್ರಾಮ ವಿಕಾಸ್ ಯೋಜನೆಯ ಅಡಿಯಲ್ಲಿ ಹೊನ್ನಿಕೊಪ್ಪಲು ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಕೆಸರು ಗದ್ದೆ ಕ್ರೀಡಾಕೂಟವನ್ನು ನಡೆಸಿದ್ದೇವೆ. ಹಾಗೆ ಈ ಬಾರಿಯೂ ಬೀಟಿವಾಡ ಗ್ರಾಮಸ್ಥರ ನೆರವಿನಿಂದ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಲು ಸಾಧ್ಯವಾಯಿತು ಎಂದು ಬೀಟಿವಾಡ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
ನೆರೆದಿದ್ದ ಕ್ರೀಡಾಭಿಮಾನಿಗಳು ಕಾರ್ಯಕ್ರಮದ ಕೊನೆಯಲ್ಲಿ ಕೊಡವ ವಾಲಗಕ್ಕೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
- ಚನ್ನನಾಯಕ