ಪೆರಾಜೆ ಗ್ರಾಮ ಸಭೆ
ಪೆರಾಜೆ, ಆ. ೯: ಇಲ್ಲಿನ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಗ್ರಾಮಸಭೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಕಂದಾಯ ಇಲಾಖೆಯಿಂದ ಪಹಣಿಗೆ ಆಧಾರ್ ಲಿಂಕ್, ಅಕ್ರಮ-ಸಕ್ರಮ ಕಡತ, ಪೋಡಿ ಸರ್ವೆ, ಬೆಳೆ ಸಮೀಕ್ಷೆ ಹಾಗೂ ದುರಸ್ತಿ ಆಗದೆ ಉಳಿದಿರುವ ಸರ್ವೆ ನಂಬರ್ಗಳಿಗೆ ಪ್ರಸ್ತುತ ಸಾಲಿನಿಂದ ಎಫ್.ಐ.ಡಿ. ಆಗದೆ ಇರುವ ಬಗ್ಗೆ ಪಂಚಾಯಿತಿ ಸದಸ್ಯ ಸುಭಾಷ್ ಚಂದ್ರ ಪ್ರಶ್ನಿಸಿದರು. ಇದಕ್ಕೆ ಕಂದಾಯ ಇಲಾಖೆಯಿಂದ ವೆಂಕಟೇಶ್ ಮಾಹಿತಿ ನೀಡಿದರು.
ಮೋಹನ್ ಪಶುಪಾಲನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಭೆಗೆ ತಿಳಿಸಿದರು. ಶಿಕ್ಷಣ ಇಲಾಖೆಯಿಂದ ಪೆರಾಜೆ ಗ್ರಾಮದಲ್ಲಿ ಕೆ.ಪಿ.ಎಸ್.ಸಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗೃಹಲಕ್ಷಿö್ಮ ಯೋಜನೆಯಲ್ಲಿ ಆದಾಯ ತೆರಿಗೆ ಪಾವತಿದಾರರಲ್ಲದವರಿಗೆ ಈ ಯೋಜನೆಯ ಮೊತ್ತ ಇದುವರೆಗೆ ಬಂದಿರುವುದಿಲ್ಲ ಎಂಬುದರ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಇಲಾಖೆಯಿಂದ ಸರಬರಾಜು ಮಾಡುವ ಆಹಾರದ ಬಗ್ಗೆ ಚರ್ಚಿಸಲಾಯಿತು. ಸೆಸ್ಕಾಂ ಇಲಾಖೆಯಿಂದ ಸಿಬ್ಬಂದಿಗಳ ಕೊರತೆ ಹಾಗೂ ಕುಂಬಳಚೇರಿ-ಕೂರ್ನಡ್ಕ ವಿದ್ಯುತ್ ಲೈನ್ ಲಿಂಕ್ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಪೆರಾಜೆ ಗ್ರಾಮಕ್ಕೆ ಪ್ರತ್ಯೇಕವಾದ ವಿದ್ಯುತ್ ಉಪಕೇಂದ್ರ ಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಗಮನ ಸೆಳೆದರು.
ಪೆರಾಜೆ ಗ್ರಾಮಕ್ಕೆ ಪಿ.ಡಬ್ಲ್ಯೂ.ಡಿ. ಮತ್ತು ನಬಾರ್ಡ್ ಯೋಜನೆಯ ಮೂಲಕ ಗ್ರಾಮಕ್ಕೆ ಎರಡು ರಸ್ತೆಗಳು ಮಂಜೂರಾಗಿದ್ದು, ಕಾಮಗಾರಿಗಳು ಅಸಮರ್ಪಕವಾಗಿದ್ದು ಮತ್ತು ಪೂರ್ಣಗೊಳಿಸದೆ ಇರುವ ಕಾರಣ ಸಾರ್ವಜನಿಕರಿಗೆ ನಡೆದಾಡಲು ತುಂಬಾ ಕಷ್ಟಕರವಾಗಿದೆ. ಈ ಬಗ್ಗೆ ಪಿ.ಡಬ್ಲ್ಯೂ.ಡಿ. ಇಂಜಿನಿಯರ್ ಅನ್ನು ಮತ್ತು ಶಾಸಕರನ್ನು ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳ ಸಭೆಯನ್ನು ಕರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆದರು ಪಂಚಾಯಿತಿಯ ಗಮನಕ್ಕೆ ತಂದು ಕೆಲಸ ನಿರ್ವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಯವರು ತಮ್ಮ ಇಲಾಖೆಯಿಂದ ದೊರೆಯುವ ಯೋಜನೆಗಳ ಮಾಹಿತಿಯನ್ನು ನೀಡಿದರು.
ಮನೆ ತೆರಿಗೆ ಮತ್ತು ನೀರಿನ ತೆರಿಗೆ ಹೆಚ್ಚಳದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಂಚಾಯಿತಿ ರಸ್ತೆ ಬದಿ ಇರುವ ಜಾಗದ ಮಾಲೀಕರು ತಮ್ಮ ಜಾಗದಿಂದ ರಸ್ತೆ ಬಾಗಿರುವ ಬೇಲಿ ಗಿಡಗಳನ್ನು ಮತ್ತು ಚರಂಡಿಗೆ ತಮ್ಮ ಜಾಗದಿಂದ ಬಿದ್ದಿರುವ ಕಳೆ ಗಿಡ ಗಂಟಿಗಳನ್ನು ತೆರವುಗೊಳಿಸುವಂತೆ ಕೋರಲಾಯಿತು.
ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸೇರಿದಂತೆ ಸದಸ್ಯರು ಅಭಿವೃದ್ಧಿ ಅಧಿಕಾರಿ ಕುಮಾರ್ ಮತ್ತು ಪೆರಾಜೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ತುಳಸಿ ಗಾಂಧಿ ಪ್ರಸಾದ್, ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸದಸ್ಯ ಮನು ಪೆರುಮುಂಡ, ಕಂದಾಯ ಇಲಾಖೆಯ ವೆಂಕಟೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಸುರೇಖಾ ಮಡಿವಾಳ್ ಬಾವಿಕಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.