ಮಡಿಕೇರಿ, ಆ. ೯: ಜಿಲ್ಲೆಯಲ್ಲಿ ಕಳೆದೆರಡು ತಿಂಗಳುಗಳ ಕಾಲ ಸುರಿದ ಮಳೆಯು ಈ ವಾರ ತುಸು ವಿಶ್ರಾಂತಿ ಪಡೆದಿದೆ. ವಾರಾಂತ್ಯವು ಆಗಿರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಹುತೇಕ ಜಿಲ್ಲೆಯ ಕೇಂದ್ರ ಮಡಿಕೇರಿಯತ್ತ ಧಾವಿಸುತ್ತಿದ್ದಾರೆ. ಮಡಿಕೇರಿ ಸಮೀಪಿಸುತ್ತಿದ್ದಂತೆ ರಸ್ತೆಯಲ್ಲಿ ತಿರುವುಗಳು ಹೆಚ್ಚಿವೆ. ವಾಹನ ಚಾಲಕರು ವೇಗದ ಮಿತಿ ಕಡಿತಗೊಳಿಸುವುದು ಅಗತ್ಯ. ವೇಗ ನಿಯಂತ್ರಿಸಲು ವಿಫಲವಾದಲ್ಲಿ ಮಡಿಕೇರಿ ಸಂಚಾರಿ ಪೊಲೀಸರು ಬೆನ್ನು ಹತ್ತಲಿದ್ದಾರೆ. ಮೈಸೂರು-ಮಡಿಕೇರಿ ರಸ್ತೆಯಲ್ಲಿ ಮಡಿಕೇರಿ ಪ್ರವೇಶಿಸಲು ಸಮೀಪಿಸುತ್ತಿದ್ದಂತೆ ತಿರುವಿನಲ್ಲಿ ರಡಾರ್ ಕ್ಯಾಮರಾ ಅಳವಡಿಸಿ ವಾಹನದ ವೇಗವನ್ನು ದಾಖಲಿಸಿ ಹೆಚ್ಚಿದ್ದರೆ ಅಂತವರನ್ನು ತಡೆದು ರೂ.೧,೦೦೦ ದಂಡ ವಿಧಿಸುವ ಕಾರ್ಯ ಇಂದು ಬೆಳಗ್ಗಿನ ಬಿಸಿಲಿನ ವಾತಾವರಣದಲ್ಲಿ ಚುರುಕಾಗಿ ನಡೆಯತ್ತಿದ್ದದ್ದು ಕಂಡು ಬಂತು. ಈ ರಸ್ತೆಯಲ್ಲಿ ಸುಮಾರು ೮ ವಾಹನಗಳ ಚಾಲಕರು ಇಂದು ರೂ.೧,೦೦೦ ದಂಡ ಕಟ್ಟಿ ಮಡಿಕೇರಿ ಪ್ರವೇಶಿಸಿದರು. ಅಲ್ಲಿ ಕೇವಲ ೪೦ ಕಿ.ಮೀ. ವೇಗದ ಮಿತಿ ಇದ್ದು, ಅರಿವಿಲ್ಲದವರು ಸರಕಾರದ ಬೊಕ್ಕಸ ತುಂಬುವ ಕೆಲಸ ಮಾಡಿದರು!