ಮಡಿಕೇರಿ, ಆ. ೯: ಜಿಲ್ಲೆಯಲ್ಲಿ ವರ್ಷಂಪ್ರತಿ ಭತ್ತದ ಕೃಷಿ ಹಿನ್ನಡೆ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹಲವಾರು ಕಾರಣಗಳಿಂದಾಗಿ ಕೃಷಿ ಪ್ರಧಾನ ಜಿಲ್ಲೆ ಕೊಡಗಿನಲ್ಲಿ ಭತ್ತದ ಬೆಳೆಯತ್ತ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಒಂದೊಮ್ಮೆ ಭತ್ತದ ಕೃಷಿಯೇ ಇಲ್ಲಿನ ಪ್ರಮುಖ ಬೆಳೆಯಾಗಿತ್ತು. ಪ್ರಸಕ್ತ ವರ್ಷ ಈತನಕ ಜಿಲ್ಲೆಯಲ್ಲಿ ಸುಮಾರು ೧೦,೦೧೫ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕೆಲಸ ಪೂರ್ಣಗೊಂಡಿದೆ. ಕಳೆದ ವರ್ಷದಂತೆ ಈ ಬಾರಿಯೂ ೨೯ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಇದರಲ್ಲಿ ಈತನಕ ಕೇವಲ ೧೦,೦೧೫ ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಕಾರ್ಯ ಪೂರ್ಣಗೊಂಡಿದೆ. ಆಗಸ್ಟ್ ಅಂತ್ಯದ ತನಕ ವಿವಿಧೆಡೆ ನಾಟಿ ಕೆಲಸ ಮುಂದುವರಿಯಲಿದೆಯಾದರೂ, ನಿರೀಕ್ಷಿತ ಗುರಿ ಸಾಧನೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಇನ್ನು ೧೦ ಸಾವಿರ ಹೆಕ್ಟೇರ್ ಸೇರಿ ಒಟ್ಟು ೨೦ ಸಾವಿರ ಹೆಕ್ಟೇರ್‌ನಷ್ಟು ಗುರಿ ಸಾಧನೆಯಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

ಕಳೆದ ವರ್ಷವೂ ೨೯ ಸಾವಿರ ಹೆಕ್ಟೇರ್‌ನ ಗುರಿಯಲ್ಲಿ ೧೯,೧೫೨ ಹೆಕ್ಟೇರ್‌ನಷ್ಟು ಮಾತ್ರ ಸಾಧನೆಯಾಗಿತ್ತು. ಭತ್ತದ ಕೃಷಿಯಿಂದ ರೈತರು ಹಿಂಜರಿಯಲು ಹಲವಾರು ಕಾರಣಗಳು ಇವೆ. ವನ್ಯಪ್ರಾಣಿಗಳ ಹಾವಳಿ, ದುಬಾರಿ ವೆಚ್ಚ, ಲಾಭಕ್ಕಿಂತ ನಷ್ಟವೇ ಅಧಿಕ, ಕಾರ್ಮಿಕರ ಸಮಸ್ಯೆ, ಮತ್ತಿತರ ಕಾರಣಗಳನ್ನು ಇಲ್ಲಿ ಉಲ್ಲೇಖಿಸಬಹುದು. ಜೊತೆಗೆ ಭತ್ತದ ಗದ್ದೆಗಳು ಪಾಳುಬೀಳುತ್ತಿರುವುದು, ನಿವೇಶನಗಳು, ತೋಟಗಳಾಗಿ ಪರಿವರ್ತನೆ ಗೊಳ್ಳುತ್ತಿರುವುದೂ ಕಾರಣವಾಗಿದೆ. ಇದರ ನಡುವೆಯೂ ಕೆಲವಾರು ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮುಂದುವರಿಸಿಕೊAಡು ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಲಾಭ - ನಷ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದೆ ಹಲವು ರೈತರು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಮುಂದುವರಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಸಂಘ - ಸಂಸ್ಥೆಗಳೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದು ಮತ್ತೊಂದು ಬೆಳವಣಿಗೆ ಎನ್ನಬಹುದು. ಸದ್ಯಕ್ಕೆ ಜಿಲ್ಲೆಯಲ್ಲಿ ರೈತರೇ ತಯಾರು ಮಾಡಿಕೊಂಡಿರುವ ಬಿ.ಕೆ.ಬಿ., ದೊಡ್ಡಿ, ಬಿಳಿಯದಂತಹ ತಳಿಗಳ ಜೊತೆಗೆ ಕೃಷಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲಾಗಿರುವ ಸಂಶೋಧಿತ ತಳಿಗಳಾದ ಐ.ಆರ್.೬೪, ತುಂಗ, ಅತಿರ, ತನು, ಹೈಬ್ರಿಡ್‌ನ ಇನ್ನಿತರ ಕೆಲವು ತಳಿ, ಆರ್.ಎನ್.ಆರ್. ೧೫೪೦೮, ಉಮಾದಂತಹ ತಳಿಗಳನ್ನು ಬೆಳೆಯಲಾಗುತ್ತಿದೆ. ಭತ್ತದ ಕೃಷಿ ಒಂದೆಡೆಯಾದರೆ, ಕೃಷಿಯಲ್ಲಿ ಮತ್ತೊಂದು ಬೆಳೆಯಾಗಿರುವ ಮುಸುಕಿನ ಜೋಳದ ಕೃಷಿಯಲ್ಲಿ ಈತನಕ ೨೪೪೩ ಹೆಕ್ಟೇರ್‌ನಷ್ಟು ಸಾಧನೆಯಾಗಿದೆ. ಪ್ರಸಕ್ತ ವರ್ಷ ೩,೫೦೦ ಹೆಕ್ಟೇರ್‌ನಲ್ಲಿ ಜೋಳ ಬೆಳೆಯುವ ಗುರಿ ಹೊಂದಲಾಗಿದ್ದು, ಈಗಾಗಲೇ ಇದರ ಅವಧಿ ಬಹುತೇಕ ಪೂರ್ಣಗೊಂಡಿರುವುದರಿAದ ಇಷ್ಟೇ ಪ್ರಮಾಣದಲ್ಲಿ ಸಾಧನೆಯಾಗುತ್ತದೆ ಎನ್ನಲಾಗುತ್ತಿದೆ.

ಕಳೆದ ವರ್ಷ ೩,೫೦೦ ಹೆಕ್ಟೇರ್‌ನ ಗುರಿಯಲ್ಲಿ ೨,೯೩೬ ಹೆಕ್ಟೇರ್‌ನಷ್ಟು ಸಾಧನೆಯಾಗಿತ್ತು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.