ವೀರಾಜಪೇಟೆ, ಆ. ೮: ಪಟ್ಟಣ ಪಂಚಾಯಿತಿ ಆಗಿದ್ದ ವೀರಾಜಪೇಟೆ ಪುರಸಭೆಯಾಗಿ ಪರಿವರ್ತನೆಗೊಂಡ ನಂತರ ಮೊದಲ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿದ್ದು, ಪುರಸಭೆಯ ೨ನೇ ಅವಧಿಗೆ ಅಧ್ಯಕ್ಷ ಸ್ಥಾನ ಬಿ.ಸಿ.ಬಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ ಸಂಖ್ಯಾಬಲ ಇರುವ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಹಿಂದಿನ ಅಧ್ಯಕ್ಷರ ಆಡಳಿತ ಅವಧಿ ೦೩.೦೫.೨೦೨೩ರಂದು ಕೊನೆಗೊಂಡ ಬಳಿಕ ಪುರಸಭೆ ಅಧಿಕಾರಿಗಳ ಆಡಳಿತದಲ್ಲಿತ್ತು.
೨೦೧೯ರ ಅಕ್ಟೋಬರ್ ೨೮ ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭ ಸರ್ಕಾರ ನಿಗದಿಪಡಿಸಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಶ್ನಿಸಿ ವಿವಿಧ ಸಂಘ ಸಂಸ್ಥೆಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿತ್ತು.
ನ್ಯಾಯಾಲಯ ಆದೇಶದಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಬಿ)ಗೆ ಒಲಿದ ಕಾರಣ ಪರಿಶಿಷ್ಠ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಒಳಗೆ ಪೈಪೋಟಿ ಏರ್ಪಟ್ಟು ಸುಶ್ಮಿತಾ ಅವರು ಅಧ್ಯಕ್ಷರಾಗಿ, ಉಪಾಧ್ಯರಾಗಿ ಕೆ.ಬಿ ಹರ್ಷವರ್ದನ್ ಆಯ್ಕೆಯಾಗಿದ್ದರು.
ಅಧಿಕಾರದಲ್ಲಿದ್ದಾಗಲೇ ಉಪಾಧ್ಯಕ್ಷ ಕೆ.ಬಿ ಹರ್ಷವರ್ದನ್ ವಿಧಿವಶ ಆದ ಕಾರಣ ಆ ಸ್ಥಾನಕ್ಕೆ ಚುನಾವಣೆ ನಡೆದು ಮಂಡೇಪAಡ ವಿನಾಂಕ್ ಕುಟ್ಟಪ್ಪ ಉಪಾಧ್ಯಕ್ಷರಾದರು. ಕಳೆದ ತಿಂಗಳು ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು ಮತ್ತೆ ಪುರಸಭೆ ಆಡಳಿತಾಧಿಕಾರಿಗಳ ಕೈ ಸೇರಿತ್ತು.
ಪುರಸಭೆಯಲ್ಲಿ ಒಟ್ಟು ೨೩ ಸದಸ್ಯರಿದ್ದು, ಅದರಲ್ಲಿ ೧೮ ಚುನಾಯಿತ ಸದಸ್ಯರು, ೫ ಸದಸ್ಯರು ಸರ್ಕಾರದಿಂದ ನಾಮನಿರ್ದೇಶಿತಗೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ೮, ಕಾಂಗ್ರೆಸ್ ೬, ಜೆಡಿಎಸ್ ೧, ಪಕ್ಷೇತರರು ೩ ಸ್ಥಾನಗಳನ್ನು ಪಡೆದುಕೊಂಡಿದ್ದರು. ಅನಂತರ ನಡೆದ ರಾಜಕೀಯ ವಿದ್ಯಾಮಾನದಲ್ಲಿ ಜೆಡಿಎಸ್ನಿಂದ ಆಯ್ಕೆಯಾದ ಮತೀನ್, ಪಕ್ಷೇತರರಾಗಿ ಆಯ್ಕೆಯಾದ ಮನೆಯಪಂಡ ದೇಚಮ್ಮ ಕಾಳಪ್ಪ, ರಜನಿಕಾಂತ್, ಜಲೀಲ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.
೧೮ ಸದಸ್ಯಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರು. ಕಳೆದ ಬಾರಿಯ ಅಧ್ಯಕ್ಷರ - ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೊಬ್ಬರನ್ನು ಅಂಗಲಾಚುವ ಪರಿಸ್ಥಿತಿ ಎದುರಾಗಿತ್ತು. ರಾಜಕೀಯ ತಂತ್ರಗಾರಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತ್ತು.
ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಸಂಖ್ಯಾಬಲ ಇದ್ದರು ಕೂಡ ತಾಂತ್ರಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನ ಲಭಿಸುವುದು ಕಷ್ಟದ ಪರಿಸ್ಥಿತಿ ಎದುರಾಗಿದೆ. ಅಧ್ಯಕ್ಷ ಸ್ಥಾನ ಬಿ.ಸಿ.ಬಿ ಮೀಸಲಾಗಿದ್ದರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಮಹಿಳಾ ಸದಸ್ಯರೊಬ್ಬರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸಂಖ್ಯಾಬಲ ಇಲ್ಲದ ಬಿಜೆಪಿಯಲ್ಲಿ ಮೂರು ಮಹಿಳಾ ಸದಸ್ಯರು ಅರ್ಹರಿದ್ದರು ಕೂಡ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುತ್ತದೆಯೇ ಎಂದು ಕಾದು ನೋಡಬೇಕಿದೆ.
ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆ ಬಂದಿರುವ ಕಾರಣ ಕಾಂಗ್ರೆಸ್ ಪೂರ್ಣ ಬಹುಮತÀ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಫಸಿಹಾ ತಬಸಮ್ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಂಭವ ಹೆಚ್ಚಿದೆ ಎಂಬ ಚರ್ಚೆ ಎದ್ದಿದೆ.
ಚುನಾಯಿತ ಸದಸ್ಯರುಗಳು: ಆಶಾ ಸುಬ್ಬಯ್ಯ, ಬಿ.ಕೆ ಅನಿತಾ, ಹೆಚ್.ಎನ್ ಪೂರ್ಣಿಮಾ, ಸುಭಾಷ್, ಮಹಾದೇವ್, ಟಿ.ಕೆ ಯಶೋಧ, ಟಿ.ಎಂ ಸುನೀತಾ, ಟಿ.ಆರ್ ಸುಶ್ಮಿತಾ, ವಿನಾಂಕ್ ಕುಟ್ಟಪ್ಪ ಬಿಜೆಪಿ ಬೆಂಬಲಿತರಾಗಿದ್ದು, ಪಟ್ಟಡ ರಂಜಿ ಪೂಣಚ್ಚ, ಸಿ.ಕೆ ಪೃಥ್ವಿನಾಥ್, ಅಗಸ್ಟಿನ್ ಬೆನ್ನಿ, ಡಿ.ಪಿ ರಾಜೇಶ್, ಮಹಮದ್ ರಾಫಿ, ತಬಸಮ್, ಎಸ್. ಎಚ್ ಮತೀನ್ ಕಾಂಗ್ರೆಸ್ ಪ್ರತಿನಿಧಿಗಳಾಗಿದ್ದಾರೆ. ದೇಚಮ್ಮ ಕಾಳಪ್ಪ, ಜಲೀಲ್, ರಜನಿಕಾಂತ್(ಪಕ್ಷೇತರರು). ಶಬರೀಶ್, ಸಿ.ಬಿ ರವಿ, ಜಿ.ಜಿ ಮೋಹನ್, ದಿನೇಶ್ ನಂಬಿಯಾರ್, ಶಾಹುಲ್ ಹಮೀದ್(ನಾಮ ನಿರ್ದೇಶಿತ ಸದಸ್ಯರು.) -ಪಾರ್ಥ ಚಿಣ್ಣಪ್ಪ