ವೀರಾಜಪೇಟೆ, ಆ. ೮: ಪಟ್ಟಣದಲ್ಲಿ ತಾ.೭ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ರಾತ್ರಿ ನಡೆದ ಪಂಜಿನ ಮೆರವಣಿಗೆಗೆ ಬೆಳಿಗ್ಗೆ ೭ ಗಂಟೆಯಿAದಲೇ ವೀರಾಜಪೇಟೆ ನಗರದ ಪ್ರಮುಖ ಬೀದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದ ಕ್ರಮವನ್ನು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಶಾಖೆ ಪತ್ರಿಕಾ ಹೇಳಿಕೆ ಮೂಲಕ ಖಂಡಿಸಿದೆ.
ಈ ರೀತಿಯ ತೀರ್ಮಾನ ತೆಗೆದುಕೊಳ್ಳುವ ಮುನ್ನ ವ್ಯಾಪಾರಸ್ಥರನ್ನು ಚೇಂಬರ್ ಆಫ್ ಕಾಮರ್ಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ನೀಡದ ಬಗ್ಗೆ ಆಕ್ಷೇಪಿಸಿದೆ. ಸಂಜೆ ನಡೆಯುವ ಕಾರ್ಯಕ್ರಮಕ್ಕೆ ೧೨ ಗಂಟೆಗಳ ಮುಂಚಿತವಾಗಿಯೇ ಬಂದೋಬಸ್ತ್ ಕಲ್ಪಿಸಬೇಕು ಎಂಬುದಾಗಿ ಎಲ್ಲೂ ಕಾನೂನು ಇಲ್ಲ. ಈಗಾಗಲೇ ಸುರಿದ ಭಾರೀ ಮಳೆಗೆ ಬಿಡುವು ಸಿಕ್ಕಿದ ಒಂದೇ ಒಂದು ಸಂತೆ ದಿನವಾದ ಬುಧವಾರದಂದು ಪೊಲೀಸ್ ಇಲಾಖೆ ಕ್ರಮದಿಂದ ಅಂಗಡಿ ಮಾಲೀಕರುಗಳು ಮತ್ತು ಇತರ ವ್ಯಾಪಾರಸ್ಥರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿ ಬಂದಿತು ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿಂದೆಯೂ ರಾಜ್ಯದ ಮುಖ್ಯಮಂತ್ರಿಯವರ ಮಡಿಕೇರಿ ಭೇಟಿ ಸಂದರ್ಭ ವಾಹನ ನಿಲುಗಡೆ ನಿಷೇಧವನ್ನು ಹೇರಲಾಗಿತ್ತು. ಮುಖ್ಯಮಂತ್ರಿಯವರು ಗೋಣಿಕೊಪ್ಪಲಿನಿಂದ ವೀರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಹಾದುಹೋಗುತ್ತಾರೆ ಎಂಬ ಕಾರಣ ನೀಡಿ ಗಂಟೆಗಳಿAದ ಮುಂಚೆಯೇ ತೆರವುಗೊಳಿಸಿರುವುದನ್ನು ಖಂಡಿಸುತ್ತಿದ್ದೇವೆ ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ರವಿ ಉತ್ತಪ್ಪ, ಉಪಾಧ್ಯಕ್ಷ ಶಾಹುಲ್ ಹಮೀದ್, ಪದಾಧಿಕಾರಿಗಳಾದ ಬಿ.ಎಂ. ಸುರೇಶ್ ತಿಳಿಸಿದ್ದಾರೆ.