ವೀರಾಜಪೇಟೆ, ಆ. ೭: ಗಮಕ ವಾಚನ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೂ ಇದನ್ನು ಕನ್ನಡ ಪಾಠದ ಮೂಲಕ ಹೇಳಿಕೊಡುವಂತಾಗಬೇಕು. ಇದಕ್ಕೆ ಸರಕಾರ ಗಮನಹರಿಸುವಂತೆ ಮೈಸೂರಿನ ಲೇಖಕಿ ಗಮಕ ವಾಚನ ಉಪನ್ಯಾಸಕಿ ಪದ್ಮಿನಿ ಶ್ರೀನಿವಾಸ ಹೇಳಿದರು.

ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ‘ಹೊಂಬೆಳಕು ಮಾಸಿಕ ತತ್ವಚಿಂತನಾಗೋಷ್ಠಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಗೀತ ರಾಮಾಯಣದಲ್ಲಿ ಶ್ರೀರಾಮ ಪಟ್ಟಾಭಿಷೇಕ' ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು. ಧರ್ಮದ ಮಾರ್ಗದಲ್ಲಿ ನಡೆಯಲು ರಾಮನಾಮದ ಗಮಕ ಕಲೆಯನ್ನು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಪಾಠದ ಮೂಲಕ ತಿಳಿಸಿ ಕೊಡಬೇಕು. ಗಮಕ ವಾಚನದ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಸಾಧ್ಯವಾಗುತ್ತದೆ ಎಂದ ಪದ್ಮಿನಿ ಅವರು, ಕಿರಿಯರು ಹಿರಿಯರಿಗೆ ಗೌರವ ನೀಡಬೇಕು ಹಾಗೂ ಪ್ರತಿಯೊಬ್ಬರು ಆತ್ಮೀಯತೆಯಿಂದ ಬದುಕಿದಾಗ ರಾಮ ರಾಜ್ಯವಾಗಲು ಸಾಧ್ಯವಾಗುತ್ತದೆ ಎಂದರು.

ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಅನಂತಶಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತಕ್ಕಿAತ ಸುಂದರವಾದ ಗಮಕ ವಾಚನಕ್ಕೆ ಹೆಚ್ಚು ಒತ್ತನ್ನು ನೀಡಬೇಕೆಂದರು. ಶ್ರೀ ಕೃಷ್ಣ ನಡೆದುಬಂದ ಮಹತ್ವದ ಹಾದಿಯ ಬಗ್ಗೆ ಈ ಸಂದರ್ಭ ವಿವರಿಸಿದರು.

ಶ್ರೀ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಗಮಕ ವಾಚನ ಕೇಳುವ ಮನಸ್ಸಿರಬೇಕು. ಮಾನವನಲ್ಲಿ ದ್ವೇಷಗಳಿಲ್ಲದೆ ಜೀವನದಲ್ಲಿ ಪರಿವರ್ತನೆಯನ್ನು ಕಾಣಬೇಕು ಎಂದರು.

ನೆಮ್ಮದಿಯ ಬದುಕು ಸಾಧಿಸಲು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಸ್ವಾಮೀಜಿ ನುಡಿದರು. ವಿದ್ಯಾರ್ಥಿ ದೀಪ್ತಿ ಸ್ವಾಗತಿಸಿ, ದಿವ್ಯದರ್ಶಿನಿ ನಿರೂಪಿಸಿ, ವರ್ಷಿಣೆ ವಂದಿಸಿದರು.