ಸುಂಟಿಕೊಪ್ಪ, ಆ. ೭: ಸುಂಟಿಕೊಪ್ಪ ಪಂಪ್ಹೌಸ್ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕುಸಿಯುವ ಭೀತಿಯ ಬಗ್ಗೆ ಮಂಗಳವಾರ ನಿವಾಸಿಗಳು ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಬುಧವಾರ ಗ್ರಾಮ ಪಂಚಾಯಿತಿ ಪಿಡಿಓ ಲೋಕೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾಗದ ಮಾಲೀಕರಿಗೆ ಎಚ್ಚರಿಕೆ ನೀಡಿ ತಾವೇ ಪರಿಹಾರ ಒದಗಿಸುವಂತೆ ಸೂಚಿಸಿದರು.
ಅಧಿಕಾರಿಗಳ ಸೂಚನೆಯಂತೆ ಮಾಲೀಕರು ಒಪ್ಪಿಗೆ ನೀಡಿ ತಾತ್ಕಾಲಿಕವಾಗಿ ಮಣ್ಣಿನ ಚೀಲ ಇಡುವ ಮೂಲಕ ಕುಸಿಯದಂತೆ ಜಾಗೃತಿ ವಹಿಸಲಾಗುವುದು. ಮಳೆಗಾಲದ ನಂತರ ತನ್ನ ಖರ್ಚಿನಲ್ಲಿ ತಡೆಗೋಡೆ ನಿರ್ಮಿಸಿ ಕೊಡುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರು.
ಈ ಭಾಗದಲ್ಲಿ ಅಂದಾಜು ೨೦೦ಕ್ಕೂ ಹೆಚ್ಚು ವಾಸದ ಮನೆಗಳಿದ್ದು, ವ್ಯಕ್ತಿಯೊಬ್ಬರು ತಮ್ಮ ನಿವೇಶನದಲ್ಲಿ ಮಣ್ಣು ತೆಗೆದು ಸಮತಟ್ಟುಗೊಳಿಸಿ ದ್ದರಿಂದ ಬರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಮುನ್ಸೂಚನೆಯಿಂದಾಗಿ ಪಂಪ್ ಹೌಸ್ ಬಡಾವಣೆಯ ನಿವಾಸಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಂಗಳವಾರವೇ ಕಂದಾಯ ಇಲಾಖೆಯ ಉಪತಹಶೀಲ್ದಾರ್ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಿ.ಎಂ. ಸುರೇಶ್, ವಸಂತಿ, ರಫೀಕ್ ಖಾನ್, ಜಿನಾಸುದ್ದೀನ್, ಪ್ರಸಾದ್ ಕುಟ್ಟಪ್ಪ, ಸ್ಥಳೀಯ ನಿವಾಸಿಗಳಾದ ಬಿ.ಕೆ. ಮೋಹನ್, ರಾಜು, ರಘು, ಸಂದೀಪ್, ಹಮೀದ್ ಇತರರು ಇದ್ದರು.