ಮುಳ್ಳೂರು, ಆ. ೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಸೋಮ ವಾರಪೇಟೆ ಯೋಜನೆ ವತಿಯಿಂದ ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಕೊಡ್ಲಿಪೇಟೆ ವಲಯದ ನೀರುಗುಂದ ಕಾರ್ಯಕ್ಷೇತ್ರದಲ್ಲಿ ಹಮ್ಮಿಕೊಳ್ಳ ಲಾಯಿತು. ಕಾರ್ಯಾಗಾರವನ್ನು ಗ್ರಾಮದ ಪ್ರಗತಿಪರ ರೈತ ಪ್ರೇಮ್ಕುಮಾರ್ ಉದ್ಘಾಟಿಸಿ ಭತ್ತ ಬೇಸಾಯದ ಕ್ರಮದ ಕುರಿತು ಅನುಭವಗಳ ನುಡಿಯಾಡಿದರು.
ಕಾರ್ಯಾಗಾರದಲ್ಲಿ ನಾಟಿ ಬ್ಯಾಂಕ್ ಕೃಷಿ ಮೇಲ್ವಿಚಾರಕ ಹರೀಶ್, ಭತ್ತದ ಕೇಂದ್ರೀಕೃತ ನರ್ಸರಿ ಮಾಡುವುದು, ಭತ್ತದ ತಳಿಗಳು, ಮಣ್ಣಿನ ಸಂಗ್ರಹ, ಟ್ರೇಗಳ ಬಳಕೆ ಮಾಡುವ ವಿಧಾನ ಇದರ ಜೊತೆಯಲ್ಲಿ ಭತ್ತ ನಾಟಿಯ ವಿಧಾನಗಳು ಸೇರಿದಂತೆ ಯಂತ್ರದ ಮೂಲಕ ನಾಟಿ ಮಾಡುವುದರಿಂದ ಆಗುವ ಅನುಕೂಲ ಸೇರಿದಂತೆ ಯಾಂತ್ರೀಕೃತ ಭತ್ತ ನಾಟಿಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಸೂರು ಗ್ರಾ.ಪಂ.ಸದಸ್ಯ ಜಯರಾಜ್, ಒಕ್ಕೂಟದ ಪದಾಧಿಕಾರಿ ಸವಿತಾ, ವೀರಭದ್ರೇಶ್ವರ ಯುವಕ ಸಂಘದ ಅಧ್ಯಕ್ಷ ರವಿ, ಹಾಲು ಡೈರಿಯ ವ್ಯವಸ್ಥಾಪಕ ರಮೇಶ್, ಸೇವಾ ಪ್ರತಿನಿಧಿ ಫಾತಿಮಾ ಮತ್ತು ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಸದಸ್ಯರು, ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.