ಕೊಡಗಿನ ಅರಣ್ಯ ಪ್ರದೇಶದಲ್ಲಿ ತಲತಲಾಂತರಗಳಿAದ ನೆಲೆನಿಂತಿ ರುವ ಬುಡಕಟ್ಟು ಜನಾಂಗಗಳ ಆಚಾರ-ವಿಚಾರ, ಪದ್ಧತಿ-ಪರಂಪರೆ ಅತೀ ವಿಶಿಷ್ಟ. ಅದೇ ರೀತಿ ಅವರ ಸಾಂಸ್ಕೃತಿಕ ಹಿನ್ನೆಲೆಯೂ ಅಷ್ಟೆ ಐತಿಹ್ಯವನ್ನು ಹೊಂದಿದೆ. ಪ್ರಕೃತಿಯ ಮಡಿಲಿನಲ್ಲಿ ಸ್ವಚ್ಛಂದವಾಗಿ ವಾಸಿಸುವ ಆದಿವಾಸಿಗಳಿಗೆ ಪರಿಸರವೇ ಪ್ರಾಣ. ಅಲ್ಲಿ ಸಿಗುವ ವಸ್ತುಗಳೇ ಅವರ ಬದುಕಿಗೆ ಆಧಾರ. ಆಧುನಿಕತೆ ಬೆಳೆಯುತ್ತಿದ್ದರೂ ಕಾಡುಮಕ್ಕಳು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬಾರದಿರುವುದು ವಿಪರ್ಯಾಸ. ಜೊತೆಗೆ ಅವಕಾಶ ವಂಚಿತರಾಗುತ್ತಿರುವುದು ಅಷ್ಟೆ ಸತ್ಯ.

ಆದರೆ, ನಾಗರಹೊಳೆಯ ನಾಣಚ್ಚಿಗದ್ದೆ ಹಾಡಿಯ ಕಲಾತಂಡ ಇದೀಗ ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡ್’ ಆಗಿ ಕಾಡುಮಕ್ಕಳ ಹಾಡು ಜಗದಗಲ ಪ್ರಸಿದ್ಧಿ ಪಡೆಯುತ್ತಿದೆ. ಹಾಡು ಬಿಡುಗಡೆಯಾದ ೧೨ ದಿನಗಳಲ್ಲಿ ಬರೋ ಬ್ಬರಿ ೯.೨೮ ಲಕ್ಷ ಮಂದಿ ‘ಯೂಟ್ಯೂಬ್’ ನಲ್ಲಿ ವೀಕ್ಷಿಸಿದ್ದಾರೆ. ಇದರೊಂದಿಗೆ ವಿವಿಧ ಮ್ಯೂಸಿಕ್ ‘ಆ್ಯಪ್’ಗಳಲ್ಲಿಯೂ ಲಕ್ಷಾಂತರ ಜನರು ಗೀತೆ ಆಲಿಸಿದ್ದಾರೆ.

ನಾಗರಹೊಳೆಯ ನಾಣಚ್ಚಿಗದ್ದೆ ಹಾಡಿಯ ಜೆ.ಬಿ. ರಮೇಶ್ ಸಾರಥ್ಯದ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಹಾಡುಗಾರರು ಕನ್ನಡ ಸಿನಿಮಾರಂಗದ ಹೆಸರಾಂತ ನಾಯಕ ನಟ ದುನಿಯಾ ಸಿನಿಮಾ ಖ್ಯಾತಿಯ ವಿಜಯ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವ ೨ನೇ ಚಿತ್ರದಲ್ಲಿ ಪ್ರಮುಖ ಗೀತೆಯೊಂದನ್ನು ಹಾಡಿ ಮನೆಮಾತಾಗುತ್ತಿದ್ದಾರೆ. ಈಗಾಗಲೇ ಈ ತಂಡ ಕೊಡಗಿನಲ್ಲಿ ದಸರಾ, ಗಣೇಶೋತ್ಸವ, ಸ್ವಾತಂತ್ರö್ಯ ದಿನಾಚರಣೆ ಸೇರಿದಂತೆ ಇನ್ನಿತರ ಸಭೆ-ಸಮಾರಂಭಗಳಲ್ಲಿ ನೀಡಿರುವ ಕಾರ್ಯಕ್ರಮಗಳು ಜನಮೆಚ್ಚುಗೆಗೆ ಪಾತ್ರ ವಾಗಿವೆ. ಸೊಪ್ಪು ಕಟ್ಟಿಕೊಂಡು, ಮುಖಕ್ಕೆ ಬಣ್ಣ ಹಚ್ಚಿಕೊಂಡು ಜೇನುಕುರುಬ ಭಾಷೆಯ ಹಾಡುಗಳಿಗೆ ಧ್ವನಿಯಾಗುವ ಇವರುಗಳು ಡ್ರಂ, ಟಿಣ್ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳನ್ನೇ ಉಪಯೋಗಿಸಿಕೊಂಡು ಕಾರ್ಯಕ್ರಮ ನೀಡುವುದು ಮತ್ತೊಂದು ವಿಶೇಷ.

‘ಭೀಮ’ನಿಗೆ ಧ್ವನಿ

೨ ವರ್ಷಗಳ ಹಿಂದೆ ವಿಜಯ್ ನಿರ್ದೇಶಿಸಿದ ಸಲಗ ಸಿನಿಮಾ ದೊಡ್ಡ ‘ಹಿಟ್’ ಆಗಿತ್ತು. ಆ ಚಿತ್ರದಲ್ಲಿಯೂ ಕಾಡಿನ ನಡುವೆ ವಾಸಿಸುವ ಸಿದ್ಧಿ ಜನಾಂಗದ ಹಾಡುಗಾರರು ಧ್ವನಿಯಾಗಿದ್ದರು. ಈ ಗೀತೆಯೂ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದೀಗ ಕೊಡಗಿನ ಜೇನು ಕುರುಬ ಭಾಷೆಯ ಗೀತೆಯನ್ನು ಸಿನಿಮಾದಲ್ಲಿ ಚಿತ್ರತಂಡ ಬಳಸಿಕೊಂಡಿದೆ.

ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ತಂಡದಿAದ ಕಲಾತಂಡಕ್ಕೆ ಕರೆ ಬಂದಿದ್ದು, ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ. ಇವರುಗಳು ಹೋಗಿ ಚಿತ್ರದ ಸಂಗೀತ ನಿರ್ದೇಶಕ ಕೊಡಗಿನವರೇ ಆದ ಚರಣ್ ರಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ತಂಡ ನೀಡಿದ ಕಾರ್ಯಕ್ರಮದ ವೀಡಿಯೋ ಗಮನಿಸಿ ಆಹ್ವಾನಿಸಿರುವುದು ಗೊತ್ತಾಗಿದೆ.

ಅನಂತರ ಜೇನುಕುರುಬರ ಜನಪದ ಗೀತೆಗೆ ಮತ್ತಷ್ಟು ಪದಗಳನ್ನು ಸೇರಿಸಿ ತಂಡದ ನಾಯಕ ರಮೇಶ್ ಸಾಹಿತ್ಯ ರಚಿಸಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ರೇಸಿಮೆ ಸೀರೆ ತಂದ ಗಂಡ ಕಣ್ಣಣಾ’ ಎಂಬ ಹಾಡು ಹೊರಬಂದಿದೆ. ಇದರ ‘ಲಿರಿಕಲ್ ವೀಡಿಯೋ’ ೧೨ ದಿನಗಳ ಹಿಂದೆ ಬಿಡುಗಡೆಯಾಗಿದೆ.

ಆಧುನಿಕ ಸಂಗೀತದೊAದಿಗೆ ತಂಡದ ಕಲಾವಿದರು ಡ್ರಂ, ಟಿಣ್‌ಗಳಲ್ಲಿ ಬಾರಿಸುವ ಸಂಗೀತವನ್ನು ಹಾಡಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಗಾಯಕ ಜೆ.ಬಿ.ಕುಮಾರ ಗೀತೆ ಹಾಡಿದ್ದು, ಜೆ.ಆರ್. ಉದಯ, ಜೆ.ಎಸ್. ಸುದೀಪ್, ಜೆ.ಆರ್. ನಿತಿನ್, ಅನಿಲ್, ರಾಮಕೃಷ್ಣ, ಜೆ.ಪಿ. ವಿನು, ಜೆ.ಆರ್. ಪ್ರದೀನ್, ಜೆ.ಆರ್. ಲತಾ, ಜೆ.ಆರ್. ತನುಜಾ, ಜೆ.ಆರ್. ರಶ್ಮಿ, ಜೆ.ಎಸ್. ವಿದ್ಯಾ, ಜೆ.ಆರ್. ಸುನಿತಾ, ಜೆ.ಎಸ್. ರಾಧಿಕಾ ಅವರುಗಳು ಹಾಡಿಗೆ ಜೊತೆಯಾಗಿದ್ದಾರೆ.

ಕೊಡಗಿನ ಸಂಗೀತ ನಿರ್ದೇಶಕ

ಮೂಲತಃ ಜಿಲ್ಲೆಯವರೇ ಆದ ಚರಣ್ ರಾಜ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಲವು ಹಿಟ್ ಚಿತ್ರಗಳ ಸಂಗೀತ ನಿರ್ದೇಶಕರಾಗಿ ಪ್ರಖ್ಯಾತಿ ಗಳಿಸುತ್ತಿರುವ ಚರಣ್ ಅವರಿಗೆ ಕೊಡಗಿನ ಪ್ರತಿಭೆಗೆ ಅವಕಾಶ ನೀಡಿದ ಸಂತಸವನ್ನು ಕಲಾತಂಡದೊAದಿಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟ ದುನಿಯಾ ವಿಜಯ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಕಲಾತಂಡದ ಸ್ಥಾಪಕ ರಮೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಕಳೆದ ೧೮ ವರ್ಷಗಳಿಂದ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಹಾಡು, ನೃತ್ಯ ಕಲಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಎಲ್ಲಾ ಕಡೆಯೂ ನಮಗೆ ಮೆಚ್ಚುಗೆ ದೊರೆಯುತ್ತದೆ. ಇದೀಗ ಸಿನಿಮಾದಲ್ಲಿ ಅವಕಾಶ ದೊರೆತಿರುವುದು ಮತ್ತಷ್ಟು ಖುಷಿ ತರಿಸಿದೆ. ಭೀಮ ಚಿತ್ರಕ್ಕೆ ಇನ್ನೂ ಮೂರು ಗೀತೆ ನೀಡಿದ್ದೇವೆ. ಅದನ್ನು ಸಿನಿಮಾದಲ್ಲಿ ಬಳಸಿಕೊಳ್ಳುವ ನಿರೀಕ್ಷೆ ಹೊಂದಿದ್ದೇವೆ. ಇನ್ನೂ ೩-೪ ಚಿತ್ರಕ್ಕೆ ನಮ್ಮ ಕಲಾವಿದರು ಹಾಡಿದ್ದಾರೆ. ಸದ್ಯದಲ್ಲಿಯೇ ಅದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರಮೇಶ್ ಮಾಹಿತಿ ನೀಡಿದರು.

ಗೀತೆಯನ್ನು ‘ಯೂಟ್ಯೂಬ್’ನಲ್ಲಿ ವೀಕ್ಷಿಸಬಹುದಾಗಿದ್ದು, ಇಷ್ಟವಾಗಿ ಮೆಚ್ಚುಗೆ ವ್ಯಕ್ತಪಡಿಸಬೇಕೆಂದಲ್ಲಿ ೯೯೦೧೪೬೦೪೯೧, ೮೦೩೭೦೮೫೫೭೧ ಸಂಖ್ಯೆಗೆ ಕರೆ ಮಾಡಿ ಶ್ಲಾಘಿಸಬಹುದಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಟಿ ಹೆಚ್.ಜೆ. ರಾಕೇಶ್