ನಾಪೋಕ್ಲು, ಆ. ೬: ಬಿಲ್ಲವ ಸಮಾಜದ ಸ್ಥಾಪನೆಗೆ ನಾಪೋಕ್ಲುವಿನಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಸದಸ್ಯರ ಸಹಕಾರದಿಂದ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಎಂ. ಪ್ರತೀಪ ಹೇಳಿದರು. ಇಲ್ಲಿನ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಲ್ಲವ ಸಮಾಜದ ‘ಆಟಿಡೊಂಜಿ ದಿನ’ ಕಾರ್ಯಕ್ರಮದ ಬಳಿಕ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೂತನವಾಗಿ ಸ್ಥಾಪಿತವಾದ ಸಮಾಜದಲ್ಲಿ ೨೧೭ ಮಂದಿ ಸದಸ್ಯರಿದ್ದಾರೆ. ಬಿಲ್ಲವ ಸಮಾಜಕ್ಕೆ ಒಳಪಟ್ಟ ಪ್ರತಿಯೊಬ್ಬರ ಮನೆಗೆ ತೆರಳಿದಾಗ ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಸಂಘದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಬಿಲ್ಲವ ಸಮಾಜ ಕೇವಲ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಸೀಮಿತವಾಗಬಾರದು. ಸಮಾಜದ ಬಡವರ ಏಳಿಗೆಗಾಗಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಶ್ರಮಿಸಲಿದೆ ಎಂದರು.

ಈ ಸಂದರ್ಭ ಸಂಘದ ವತಿಯಿಂದ ನೂತನವಾಗಿ ಮರಣ ನಿಧಿ ಸ್ಥಾಪಿಸಲಾಯಿತು. ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಾಗಿದ್ದರೂ ಕೆಲವು ಬದಲಾವಣೆಯೊಂದಿಗೆ ಈಗಿರುವ ೨೧ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯೇ ಮುಂದಿನ ಮೂರು ವರ್ಷಕ್ಕೆ ಮುಂದುವರೆಯುವAತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರತೀಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ವಸಂತ, ಜಗನ್ನಾಥ್, ಕಾರ್ಯದರ್ಶಿಯಾಗಿ ಲೋಹಿತ್, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ್, ಖಜಾಂಚಿಯಾಗಿ ದೀಪಕ್ ಬಿ.ಡಿ ಹಾಗೂ ಇತರ ನಿರ್ದೇಶಕರು, ನಿವೃತ್ತ ಸೈನಿಕರು, ಹಿರಿಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬಳಿಕ ಜರುಗಿದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಹಕರಿಸಿ, ಪ್ರೋತ್ಸಾಹಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.