ಕಡಂಗ, ಆ. ೫: ವಾಹನ ನಿಲುಗಡೆ ಸಮಸ್ಯೆ, ಅಂಗಡಿ ಪರವಾನಗಿ, ಪ್ಲಾಸ್ಟಿಕ್ ಮುಕ್ತಗೊಳಿಸುವುದು ಮತ್ತಿತರ ಚರ್ಚೆಗಳು ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವತಿಯಿಂದ ಆಯೋಜಿಸಲಾಗಿದ್ದ ಜಂಟಿ ಸಭೆಯಲ್ಲಿ ನಡೆದವು. ಇಲ್ಲಿನ ಕಡಂಗದ ಶಾದಿ ಮಹಲ್ನಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕರು ಪಟ್ಟಣದ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪ್ರಮುಖವಾಗಿ ವಾಹನಗಳ ನಿಲುಗಡೆ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಯಾಯಿತು. ವಾಹನಗಳನ್ನು ಅಂಗಡಿಗಳ ಮುಂದೆ ನಿಲ್ಲಿಸಿ ವ್ಯಾಪಾರಕ್ಕೆ ತೊಡಕು ಉಂಟಾಗುವುದನ್ನು ತಡೆಗಟ್ಟುವ ಬಗ್ಗೆ ಹಾಗೂ ಆಟೋ ಚಾಲಕರು ವಾಹನ ನಿಲ್ಲಿಸಿ ಕಾಲಹರಣ ಮಾಡುತ್ತಾ, ರಾತ್ರಿ ಸಮಯಗಳಲ್ಲಿ ಆಟೋ ಬಾಡಿಗೆ ಕರೆದರು ಸಹಕರಿಸದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಚೋಳಂಡ ಸುಗುಣ ಮಾತನಾಡಿ, ಒಂದು ವಾರದ ಒಳಗೆ ಆಟೋ ಚಾಲಕರ ಸಭೆ ನಡೆಸಿ ಸಮಸ್ಯೆಗಳನ್ನು ನಿವಾರಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಆಟೋ ನಿಲ್ದಾಣದ ಸ್ಥಳ ನಿಗದಿಪಡಿಸಬೇಕಾಗಿ ಸಾರ್ವಜನಿಕರು ವಿನಂತಿಸಿಕೊAಡರು. ಅದೇ ರೀತಿ ಸಾರ್ವಜನಿಕವಾಗಿ ಶೌಚಾಲಯ ಕಡಂಗ ಪಟ್ಟಣದಲ್ಲಿ ಶೀಘ್ರವಾಗಿ ನಿರ್ಮಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಪಟ್ಟಣದ ಪಶುವೈದ್ಯ ಶಾಲಾ ಸಮೀಪದಲ್ಲಿ ಅಥವಾ ಸರಕಾರಿ ಕಟ್ಟಡದಲ್ಲಿ ನಿಲ್ದಾಣ ನಿರ್ಮಿಸಲಾಗುವುದೆಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಕಸ ವಿಲೇವಾರಿ ಪಟ್ಟಣದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ಮನೆಯ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಅವರೇ ವಿಲೇವಾರಿ ಮಾಡಿದರೆ ಕಸದ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ಮಾತನಾಡಿ, ಘನ ತ್ಯಾಜ್ಯ ಘಟಕದ ಕಾಮಗಾರಿಯು ಪ್ರಾರಂಭವಾಗಿದ್ದು ಕಸ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಯ ಅಧೀನದಲ್ಲಿ ಸಂಜೀವಿನಿ ಒಕ್ಕೂಟದವರು ವಹಿಸಿಕೊಂಡಿದ್ದಾರೆAದು ಮಾಹಿತಿ ನೀಡಿದರು.
ಪ್ರಮುಖವಾಗಿ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ ಎಂದು ವಿರಾಜಪೇಟೆ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ ಮೇರೆಗೆ ಪಂಚಾಯಿತಿ ವತಿಯಿಂದ ಆಗಸ್ಟ್ ೧೫ ರ ಒಳಗೆ ಕಡಂಗದ ಎಲ್ಲಾ ಕಡೆಯಲ್ಲೂ ವಾಹನ ನಿಲುಗಡೆ ಸೂಚನಾ ಫಲಕವನ್ನು ಅಳವಡಿಸಲಾಗುವುದು ಎಂದು ಸದಸ್ಯರು ತಿಳಿಸಿದರು.
ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಿದಲ್ಲಿ ಪೊಲೀಸ್ ಇಲಾಖೆಯಿಂದ ಲಾಕರ್ ಅಳವಡಿಸಲಾಗುವುದು. ನಂತರ ದಂಡ ಕಟ್ಟಿ ಬಿಡುಗಡೆಗೊಳಿಸಬೇಕಾಗುತ್ತದೆ ಎಂದು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಎಚ್ಚರಿಸಿದರು. ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ವಿದ್ಯುತ್ ಸಂಪರ್ಕ ಕಡಿತವಾಗಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುಬಿರ್ ಸಿ.ಇ. ಮಾತನಾಡಿ, ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯುತ್ ಇಲಾಖೆ ಹಾಗೂ ಶಾಸಕರಿಗೆ ಮನವಿ ನೀಡಿದಾಗ ಅದಕ್ಕೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಜಮಾಹತ್ ಕಾರ್ಯದರ್ಶಿ ಅಬ್ದುಲ್ ರಹಮಾನ್ ಮಾತನಾಡಿ, ಗಾಂಜಾ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪಿಡಿಓ ಆಶಾಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡAಡ ರಾಣಿ ಗಣಪತಿ, ವಾಣಿ, ಮೊಹಮ್ಮದ್, ಪೊಲೀಸ್ ಠಾಣಾಧಿಕಾರಿ ವಾಣಿಶ್ರೀ ಬಿ.ಎಸ್., ಸಂದೀಪ್ ಹಾಗೂ ಸಿಬ್ಬಂದಿ ವರ್ಗದವರು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳಯ್ಯ, ಸುಗುಣ, ಪಂಚಾಯಿತಿ ಸಿಬ್ಬಂದಿ ದಿನೇಶ್ ಕುಮಾರ್, ಮಾಜಿ ಸದಸ್ಯರಾದ ಪ್ರಕಾಶ್, ಇಬ್ರಾಹಿಂ ಮತ್ತು ಸಾರ್ವಜನಿಕರು ಹಾಜರಿದ್ದರು.