ಮಡಿಕೇರಿ, ಆ. ೫: ಮಡಿಕೇರಿ ಗೌಡ ಮಹಿಳಾ ಒಕ್ಕೂಟದಿಂದ ‘ಆಟಿ ಹಬ್ಬ’ವನ್ನು ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಕೊಡಗಿನ ಹಲವು ಭಾಗಗಳಿಂದ ಬಂದಿದ್ದ ಮಹಿಳೆಯರು ಆಟಿ ತಿಂಗಳ ವಿವಿಧ ಸ್ವಾದಿಷ್ಟ ತಿನಿಸುಗಳಾದ ಆಟಿ ಸೊಪ್ಪಿನ ಪಾಯಸ, ಹಲ್ವಾ, ಜೆಲ್ಲಿ, ಮರ ಕೆಸ, ಕಣಿಲೆ, ಹಲಸಿನ ಹಣ್ಣಿನಿಂದ ಮಾಡಿದ ಖಾದ್ಯಗಳು ಅಲ್ಲದೆ ನಮ್ಮ ಹಿರಿಯರು ಮಾಡುತ್ತಿದ್ದ ಮರೆತು ಹೋಗಿರುವ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ತಂದು ಪ್ರದರ್ಶನಕ್ಕೆ ಇಟ್ಟಿದ್ದರು.
ಸಮಾರಂಭವನ್ನು ಹಿರಿಯರಾದ ದಂಬೆಕೋಡಿ ಲೀಲಾ ಚಿಣ್ಣಪ್ಪ ಆಟಿ ಪಾಯಸವನ್ನು ತಿನ್ನುವುದರ ಮೂಲಕ ಉದ್ಘಾಟಿಸಿದರು.
ಸಮಾರಂಭವು ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಹಿರಿಯರಾದ ಪಂಜಿಪಳ್ಳ ಇಂದ್ರಾಕ್ಷಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಬರೆದಿರುವ ಪುಸ್ತಕ ‘ಹೊಂಬಾಳೆ’ಯನ್ನು ಶ್ರೀ ಸೂರ್ತಲೆ ಸೋಮಣ್ಣನವರು ಬಿಡುಗಡೆ ಮಾಡಿದರು.
ಆಟಿ ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಆಶು ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆ, ಸೋಬಾನೆ ಮತ್ತು ಜಾನಪದ ಗೀತೆ ಗಾಯನ ಕಾರ್ಯಕ್ರಮ ನಡೆಸಲಾಯಿತು.
ಆಟಿ ಹಬ್ಬಕ್ಕೆ ವಿವಿಧ ಗೌಡ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರು ತಯಾರಿಸಿ ತಂದಿದ್ದ ಖಾದ್ಯಗಳನ್ನು ಸವಿದು ಎಲ್ಲರೂ ಸಂಭ್ರಮಪಟ್ಟರು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮತ್ತು ನಿರೂಪಣೆ ದೇಲಂಪಾಡಿ ರಮ್ಯಾ ಹಾಗೂ ಬಾರನ ಶೋಭಾ ವಂದನಾರ್ಪಣೆ ಮಾಡಿದರು.