ಚೆಯ್ಯಂಡಾಣೆ, ಆ. ೫: ನರಿಯಂದಡ ಸಮೀಪದ ಚೇಲಾವರ ಗ್ರಾಮದಲ್ಲಿ ೬ ಕಾಡಾನೆಗಳ ಹಿಂಡು ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಕಾರ್ಮಿಕರು ಪ್ರಾಣಪಾಯದಿಂದ ಪಾರಾದ ಘಟನೆ ಸೋಮವಾರ ಬೆಳಿಗ್ಗೆ ಬಾಳೆಕಾಡು ಎಸ್ಟೇಟ್‌ನಲ್ಲಿ ನಡೆದಿದೆ.

ಚೇಲಾವರ ಗ್ರಾಮದ ಪಾಲೇಕಂಡ ಶಾಂತಿ ಮಾಚಯ್ಯ ಅವರ ಬಾಳೆಕಾಡು ಎಸ್ಟೇಟ್‌ಗೆ ಎಂದಿನAತೆ ೬ ಜನ ಅಸ್ಸಾಂ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದ ಆ ಸಂದರ್ಭ ತೋಟದಿಂದ ದಿಢೀರ್ ೬ ಕಾಡಾನೆಯ ಹಿಂಡು ಕಾರ್ಮಿಕರನ್ನು ಓಡಿಸಿದೆ. ದಿಕ್ಕು ಪಾಲಾಗಿ ಓಡಿ ಮೂವರು ಪಾರಾದರೆ, ಉಳಿದ ಮೂವರು ಅಸ್ಸಾಂ ಕಾರ್ಮಿಕರಾದ ನಜಿಮಾ, ಎಲ್ಮಿನ, ಮನುರಾ ಓಡುವ ಸಂದರ್ಭ ಬಿದ್ದು ಕೈ, ಕಾಲುಗಳಿಗೆ ಗಾಯಗಳಾಗಿದ್ದು ಇವರನ್ನು ಕೂಡಲೇ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಕಾಡಾನೆಗಳೊಂದಿಗೆ ಮರಿಯಾನೆ ಇರುವುದರಿಂದ ಆನೆಗಳನ್ನು ಕಾಡಿಗಟ್ಟಲು ಸಮಸ್ಯೆಯಾಗಿದೆ.

(ಮೊದಲ ಪುಟದಿಂದ) ಮುಂದಿನ ೧೫ ದಿನಗಳಲ್ಲಿ ಕಾಡಾನೆಯನ್ನು ಅರಣ್ಯಧಿಕಾರಿಗಳು ಕಾಡಿಗಟ್ಟುವ ಭರವಸೆ ನೀಡಿದ್ದಾರೆ.

ಸ್ಥಳಕ್ಕೆ ಹಾಗೂ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಆರ್.ಎಫ್.ಓ ಶಿವರಾಂ, ಡಿ.ಆರ್.ಎಫ್.ಓ ಕಳ್ಳಿರ ದೇವಯ್ಯ, ಶ್ರೀನಿವಾಸ್, ಕ್ಯಾಂಪ್ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಗ್ರಾಮದಲ್ಲಿ ಕಳೆದ ವರ್ಷ ಮಹಿಳೆಯನ್ನು ಕಾಡಾನೆ ದಾಳಿ ನಡೆಸಿದ ಸಂದರ್ಭ ಪ್ರಾಣಪಾಯದಿಂದ ಪಾರಾಗಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಪುನಃ ಇದೆ ಗ್ರಾಮದಲ್ಲಿ ಅಸ್ಸಾಂ ಕಾರ್ಮಿಕರ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಇಲಾಖೆ ಇದಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗಟ್ಟಲು ೧೫ ದಿನ ಬೇಕು ಅನ್ನುತ್ತಾರೆ. ಅಷ್ಟರಲ್ಲಿ ನಮ್ಮ ತೋಟದ ಪಾಡೇನು?

ಕೂಡಲೇ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಕಾಡಿಗಟ್ಟಬೇಕು, ಇಲ್ಲ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು, ನಷ್ಟ ಹೊಂದಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥ ಕುಟ್ಟನ ಸುನಿಲ್ ಆಗ್ರಹಿಸಿದ್ದಾರೆ.