ವರದಿ: ಚಂದ್ರಮೋಹನ್

ಕುಶಾಲನಗರ, ಆ. ೫: ಕುಶಾಲನಗರ ಸಮೀಪದ ಪ್ರಖ್ಯಾತ ಪ್ರವಾಸಿ ತಾಣವಾಗಿರುವ ದುಬಾರೆ ಸಾಕಾನೆ ಶಿಬಿರ ಇದೀಗ ಪ್ರವಾಸಿಗರಿಗೆ ದುಬಾರಿಯಾಗಿ ಪರಿಣಮಿಸಿದೆ.

ದುಬಾರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ವಾರದ ಸಾಮಾನ್ಯ ದಿನಗಳಲ್ಲಿ ನದಿ ದಾಟಿ ಶಿಬಿರಕ್ಕೆ ತೆರಳಲು ಬೋಟ್‌ಗೆ ವ್ಯಕ್ತಿಯೊಬ್ಬರಿಗೆ ೬೦ ರೂಪಾಯಿ, ಶಿಬಿರಕ್ಕೆ ಪ್ರವೇಶ ಶುಲ್ಕ ರೂ. ೧೨೦, ಮತ್ತು ಶನಿವಾರ ಭಾನುವಾರ ಹಾಗೂ ಸರಕಾರಿ ರಜಾದಿನಗಳಲ್ಲಿ ವಿಶೇಷ ದರ ನಿಗದಿಪಡಿಸಿದ್ದು, ಪ್ರವೇಶ ಶುಲ್ಕ ರೂ. ೨೦೦ ಮತ್ತು ಬೋಟ್ ಮೂಲಕ ತೆರಳಲು ತಲಾ ರೂ.೭೫ ನಿಗದಿ ಮಾಡಲಾಗಿದೆ.

ಆನೆಗಳನ್ನು ಸ್ನಾನ ಮಾಡಿಸಲು ನೂರಾರು ರೂ.ಗಳು ತೆರಬೇಕಾಗುತ್ತದೆ. ಆನೆಗಳಿಗೆ ಆಹಾರ ತಿನ್ನಿಸಲು ಮತ್ತೆ ಹೆಚ್ಚುವರಿ ಹಣ ನೀಡಬೇಕು. ಇದರೊಂದಿಗೆ ಶಿಬಿರಕ್ಕೆ ತೆರಳುವ ಸಂದರ್ಭ ವಾಹನ ನಿಲುಗಡೆಗೆ ಕೂಡ ನಿಗದಿತ ಹಣ ಪಾವತಿಸಬೇಕು.

ಪ್ರವಾಸಿಗ ಓರ್ವ ಕೇವಲ ಒಂದು ಗಂಟೆ ಅವಧಿಯಲ್ಲಿ ಸಾಕಾನೆ ಶಿಬಿರಕ್ಕೆ ಭೇಟಿ ಮಾಡುವ ಸಂದರ್ಭ ಒಂದು ಸಾವಿರಕ್ಕೂ ಅಧಿಕ ರೂಗಳನ್ನು ವ್ಯಯ ಮಾಡಬೇಕಾದ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಏಕಾಏಕಿ ಅವೈಜ್ಞಾನಿಕವಾಗಿ ದರ ನಿಗದಿಪಡಿಸಿರುವುದರ ಬಗ್ಗೆ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶ ವಿದೇಶಗಳಿಂದ ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ದುಬಾರೆ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಪರೂಪದಲ್ಲಿ ಆನೆಗಳನ್ನು ನೋಡುವ ಅವಕಾಶಕ್ಕೆ ಇದೀಗ ಅರಣ್ಯ ಇಲಾಖೆ ಬಿಸಿ ಮುಟ್ಟಿಸಿದೆ ಎಂದರೆ ತಪ್ಪಾಗಲಾರದು. ದಿನನಿತ್ಯ ಪ್ರವಾಸಿಗರಿಂದ ಸಂಗ್ರಹವಾಗುವ ಹಣವನ್ನು ಕೂರ್ಗ್ ಫೌಂಡೇಶನ್ ಮತ್ತು ಅಮ್ಮಾಳೆ ಅರಣ್ಯ ಸಮಿತಿ ಖಾತೆಗೆ ಜಮಾ ಮಾಡುತ್ತಿದ್ದು ಈ ಮೂಲಕ ಕೋಟ್ಯಂತರ ರೂಪಾಯಿ ಇಲಾಖೆಗೆ ದೊರೆಯುತ್ತಿದೆ.

ಶಿಬಿರದಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಲಭ್ಯಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಕನಿಷ್ಟ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕೂಡ ಕಲ್ಪಿಸಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಪ್ರವಾಸಿಗರಿಂದ ಸಂಗ್ರಹ ಆಗುವ ಹಣವನ್ನು ಪ್ರವಾಸಿಗರ ಸೌಕರ್ಯಕ್ಕೆ ಕನಿಷ್ಟ ಮೊತ್ತವಾದರೂ ಒದಗಿಸಬೇಕೆನ್ನುವುದು ಪ್ರವಾಸಿಗರ ಅಭಿಪ್ರಾಯವಾಗಿದೆ. ಶಿಬಿರದಲ್ಲಿ ಪ್ರವಾಸಿಗರಿಗೆ ಆನೆಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ ಕೊರತೆ ಕೂಡ ಎದ್ದು ಕಾಣುತ್ತಿದೆ.

ಶಿಬಿರದ ಶೌಚಾಲಯಗಳು ಕೂಡ ಸ್ವಚ್ಛತೆಯ ಕೊರತೆಯನ್ನು ಎದುರಿಸುತ್ತಿದೆ ಎನ್ನುವುದು ಪ್ರವಾಸಿಗರ ದೂರಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಆಗಮಿಸುವ ಸಂದರ್ಭ ನದಿ ದಾಟಲು ಸಾಲು ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಕೆಲವೇ ಗಂಟೆಗಳ ಕಾಲ ನಿಗದಿತ ಅವಧಿಯಲ್ಲಿ ಮಾತ್ರ ಶಿಬಿರದಲ್ಲಿ ಆನೆಗಳ ದರ್ಶನ ಪಡೆಯಲು ಸಾಧ್ಯ. ನಂತರ ಎಂದಿನAತೆ ಆನೆಗಳನ್ನು ಕಾಡಿಗೆ ಬಿಡುವ ಕೆಲಸ ನಡೆಯುತ್ತಿದೆ. ದೂರದಿಂದ ಬಂದ ಪ್ರವಾಸಿಗ ಆನೆಗಳ ದರ್ಶನದಿಂದ ವಂಚಿತನಾಗಿ ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗುವ ಪರಿಸ್ಥಿತಿಯೂ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಕಾಮಗಾರಿ ತಕ್ಷಣ ಕೈಗೊಳ್ಳಬೇಕಾಗಿದೆ ಎನ್ನುವುದು ಪ್ರವಾಸಿಗರ ಆಗ್ರಹವಾಗಿದೆ. ಕಳೆದ ಕೆಲವು ವರ್ಷಗಳಿಂದ ನದಿಗೆ ಅಡ್ಡಲಾಗಿ ನಿರ್ಮಾಣವಾಗಬೇಕಾಗಿರುವ ತೂಗು ಸೇತುವೆಯ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಗಿದ್ದು ಅಂದಾಜು ೬ ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇನ್ನೂ ಈ ಯೋಜನೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ ಎಂದು ಹಲವರು ‘ಶಕ್ತಿ’ಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ವಿಷಯಗಳ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಭಾಸ್ಕರ್, ಪ್ರವಾಸಿಗರಿಂದ ಸಂಗ್ರಹವಾಗುವ ಹಣವನ್ನು ಕೊಡಗು ಫೌಂಡೇಶನ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಮೊತ್ತವನ್ನು ಬಳಸಿ ಶಿಬಿರಕ್ಕೆ ತೆರಳಲು ನದಿಗೆ ಅಡ್ಡಲಾಗಿ ಬೃಹತ್ ತೂಗು ಸೇತುವೆ ನಿರ್ಮಾಣ ಯೋಜನೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೊಡಗು ವನ್ಯಪ್ರಾಣಿ ಮಾನವ ಸಂಘರ್ಷ ಸಮಿತಿ ಸಭೆಯಲ್ಲಿ ಜಿಲ್ಲೆಯ ಶಾಸಕರುಗಳ ಸಮ್ಮುಖದಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಂದ ಸಂಗ್ರಹವಾಗುವ ಹಣದ ಒಂದು ಭಾಗವನ್ನು ಅರಣ್ಯ ಹಕ್ಕು ಸಮಿತಿಯ ಮೂಲಕ ಸದಸ್ಯರ ಅಭಿವೃದ್ಧಿ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.