ಸೋಮವಾರಪೇಟೆ, ಜು. ೨೨: ನಿನ್ನೆಯಿಂದ ವರುಣನ ಭೋರ್ಗರೆತ ಕೊಂಚ ಮಟ್ಟಿಗೆ ತಗ್ಗಿದ್ದರೂ ವಾಯುವಿನ ಆರ್ಭಟ ಜೋರಾಗಿದೆ. ಭಾರೀ ಗಾಳಿಗೆ ಅಲ್ಲಲ್ಲಿ ಮರಗಳು ಉರುಳುತ್ತಿದ್ದು, ವಿದ್ಯುತ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಸೋಮವಾರಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ- ಯಡವನಾಡು- ಕಾರೆಕೊಪ್ಪ ಮಾರ್ಗದ ಅಲ್ಲಲ್ಲಿ ಮರಗಳು ಕೆಳಗುರುಳಿದ್ದು, ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳು ಕಾರ್ಗತ್ತಲಲ್ಲಿ ಮುಳುಗಿವೆ. ನಿನ್ನೆಯಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಬಿರುಗಾಳಿಯಂತೆ ಬೀಸುತ್ತಿರುವ ಗಾಳಿ, ಅಲ್ಲಲ್ಲಿ ಮರಗಳನ್ನು ನೆಲಕ್ಕುರುಳಿಸುತ್ತಿವೆ.

ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು, ಕಂಬಗಳು ನೆಲಕ್ಕಚ್ಚುತ್ತಿದ್ದು, ವಿದ್ಯುತ್ ಸ್ಥಗಿತದಿಂದಾಗಿ ಮನೆಗಳು ಕತ್ತಲ್ಲಲ್ಲಿ ಮುಳುಗುವಂತಾಗಿದೆ. ಮಳೆಗಾಲ ಪೂರ್ವದಲ್ಲಿ ವಿದ್ಯುತ್ ಮಾರ್ಗಕ್ಕೆ ಅಡಚಣೆಯಾಗುವ ಮರಗಳು, ಕೊಂಬೆಗಳನ್ನು ತೆರವುಗೊಳಿಸದೇ ಇದ್ದ ಸೆಸ್ಕಾಂಗೆ ಇದೀಗ ‘ಪುರುಸೊತ್ತಿಲ್ಲದ ಕೆಲಸ’ ಲಭಿಸಿದೆ.

ಭಾರೀ ಗಾಳಿಗೆ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ಗ್ರಾಮದಲ್ಲಿ ಮರಗಳು ರಸ್ತೆಗೆ ಉರುಳಿ ಸಂಚಾರ ಸ್ಥಗಿತಗೊಂಡಿದೆ. ಇದರೊಂದಿಗೆ ವಿದ್ಯುತ್ ಮಾರ್ಗಗಳ ಮೇಲೆ ಮರ ಬಿದ್ದಿರುವ ಹಿನ್ನೆಲೆ ಕಂಬಗಳು ನೆಲಕ್ಕಚ್ಚಿವೆ. ಗ್ರಾಮಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಕಲ್ಕAದೂರು ಗ್ರಾಮದ ಮೂಲಕ ವಿದ್ಯುತ್ ಪೂರೈಕೆ ಮಾಡುವ ಮಾರ್ಗದಲ್ಲಿ ಮರಗಳು ಬಿದ್ದು, ೪ ಕಂಬಗಳು ಮುರಿದು ಬಿದ್ದಿವೆ. ತೋಳೂರುಶೆಟ್ಟಳ್ಳಿಯ ನಡ್ಲಕೊಪ್ಪ, ಪಟ್ಟಣ ಸಮೀಪದ ಯಡೂರು ಭಾಗದಲ್ಲಿ ತಲಾ ೨ ಕಂಬಗಳು ಮುರಿದುಬಿದ್ದಿವೆ.

ಸೋಮವಾರಪೇಟೆಗೆ ಕುಶಾಲನಗರದ ಮೂಲಕ ವಿದ್ಯುತ್ ಪೂರೈಸುವ ಮಾರ್ಗವು ದಿನಕ್ಕೆ ನಾಲ್ಕೆöÊದು ಬಾರಿ ದುರಸ್ತಿಗೆ ಒಳಪಡುತ್ತಿದೆ. ಯಡವನಾಡು ಅರಣ್ಯ ಸೇರಿದಂತೆ ಖಾಸಗಿ ಜಮೀನುಗಳ ಮೂಲಕ ಹಾದು ಬಂದಿರುವ ೩೩ ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮರಗಳು ಬೀಳುತ್ತಿದ್ದು, ಸೆಸ್ಕ್ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ೫೫, ಕೊಡ್ಲಿಪೇಟೆಗೆ ೪೮.೨, ಸುಂಟಿಕೊಪ್ಪಕ್ಕೆ ೯, ಶಾಂತಳ್ಳಿಗೆ ೧೦೦, ಕುಶಾಲನಗರಕ್ಕೆ ೨.೬, ಶನಿವಾರಸಂತೆಗೆ ೪೦ ಮಿ.ಮೀ. ಮಳೆಯಾಗಿರುಗ ಬಗ್ಗೆ ವರದಿಯಾಗಿದೆ.