ಐಗೂರು, ಜ. ೨೨: ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳ ಪರಿಶೀಲನೆ ನಡೆಸಲು ಆಗಮಿಸಿದ್ದ ಸಚಿವ ಬೋಸರಾಜು ಅವರು ಐಗೂರಿನ ಕಿರಗಂದೂರು ವ್ಯಾಪ್ತಿಯ ನೂತನ ಸೇತುವೆ ಬಳಿ ರಸ್ತೆಗೆ ಮೇಲ್ಮಟ್ಟದಲ್ಲಿ ನೀರು ಹರಿಯುವ ಜಾಗಕ್ಕೆ ಶಾಸಕ ಮಂತರ್ ಗೌಡ ಹಾಗೂ ಇತರ ಅಧಿಕಾರಿಗಳೊಂದಿಗೆ ಭೇಟೆ ನೀಡಿದರು. ಕಿರುಗಂದೂರು ಗ್ರಾಂ.ಪA. ವ್ಯಾಪ್ತಿಗೆ ಸೇರುವ ದುರ್ಗಾ ನಗರದ ಭಾಗದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಚೋರನ ಹೊಳೆ ತುಂಬಿ ಹರಿದು ಈ ಹೊಳೆಯ ಬದಿಯಲ್ಲಿ ವಾಸಿಸುವ ಕುಟುಂಬಗಳ ಮನೆಗಳು ಜಲಾವೃತಗೊಂಡಿತ್ತು. ಈ ಭಾಗದಲ್ಲಿ ಚೋರನ ಹೊಳೆಯು ಮೇಲ್ಮಟ್ಟಕ್ಕೆ ರಸ್ತೆಗೆ ಹರಿದು ಡಿ.ಬಿ.ಡಿ, ಬಾಗಲಕಂಡಿ ಮುಖಾಂತರ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪರ್ಕ ಕೂಡ ಕಡಿತಗೊಂಡಿತ್ತು. ಈ ಬಗ್ಗೆ ಐಗೂರು ವ್ಯಾಪ್ತಿಯ ಗ್ರಾಮಸ್ಥರು ಸಚಿವರ ಗಮನ ಸೆಳೆದಿದ್ದು, ಹೊಳೆಯ ಭಾಗದಲ್ಲಿ ವಾಸಿಸುವ ನಿವಾಸಿಗಳಾದ ರಾಜೇಂದ್ರ ಅವರ ಮನೆಯಿಂದ ನೂತನ ಸೇತುವೆಯವರೆಗೆ ತಡೆಗೋಡೆ ನಿರ್ಮಿಸಿಕೊಡುವುದಾಗಿ ನಿವಾಸಿಗಳಿಗೆ ಭರವಸೆ ನೀಡಿ ಸ್ಥಳದಲ್ಲಿದ್ದ ಅಭಿಯಂತರರಿಗೆ ಈ ಬಗ್ಗೆ ಕ್ರಿಯಾಯೋಜನೆಯನ್ನು ತಯಾರಿಸುವಂತೆ ಸೂಚಿಸಿದರು.

ಐಗೂರಿನ ಐತಿಹಾಸಿಕ, ಇದೀಗ ಅಪಾಯದಂಚಿನಲ್ಲಿರುವ ಕಬ್ಬಿಣ ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಾಣ ಸಂಬAಧ ರೂ.೧೦ ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಇನ್ನೂ ಕೂಡ ಪ್ರಾರಂಭವಾಗದ ಬಗ್ಗೆ ಗ್ರಾಮಸ್ಥರು, ಸಚಿವರು ಹಾಗೂ ಶಾಸಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಡಾ.ಮಂತರ್ ಗೌಡ, ಮೊದಲು ವಾಹನ ಚಲಿಸಲು ಬದಲಿ ಮಾರ್ಗದ ವ್ಯವಸ್ಥೆಗಾಗಿ ಸೋಮವಾರಪೇಟೆ - ಮಡಿಕೇರಿ ಹೆದ್ದಾರಿ ರಸ್ತೆಯ ಕಾಜೂರು ಜಂಕ್ಷನ್‌ನಿAದ ಅರಣ್ಯ ಭಾಗದಲ್ಲಿ ಐಗೂರಿನವರೆಗೆ ಈಗಿರುವ ಕಿರಿದಾದ ರಸ್ತೆಯ ಅಗಲೀಕರಣ ಮತ್ತು ಆ ಭಾಗದ ಕಿರಿದಾದ ಸೇತುವೆಯನ್ನು ದುರಸ್ತಿಗೊಳಿಸಿ, ಬದಲಿ ರಸ್ತೆಯ ಪರ್ಯಾಯ ಮಾರ್ಗವನ್ನು ಮಾಡುವ ಅಗತ್ಯವಿದೆ. ಇದಕ್ಕಾಗಿ ರೂ.೨ ಕೋಟಿ ಮೀಸಲಿಟ್ಟಿದ್ದು, ಈ ಆಷಾಢ ಮಾಸ ಮುಗಿದ ನಂತರ ಆಗಸ್ಟ್ ತಿಂಗಳಲ್ಲಿ ಐಗೂರಿನ ನೂತನ ಸೇತುವೆಯ ಕೆಲಸಕ್ಕೆ ಭೂಮಿ ಪೂಜೆ ಮಾಡಿ ಕೆಲಸ ಪ್ರಾರಂಭಿಸುವುದಾಗಿ ತಿಳಿಸಿದರು. ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಇನ್ನೂ ಪ್ರಾರಂಭವಾಗದಿರುವ ಬಗ್ಗೆ ‘ಶಕ್ತಿ’ ಈ ಹಿಂದೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟರಾಜ್, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್, ಗ್ರಾಮ ಲೆಕ್ಕಾಧಿಕಾರಿ ನೇಹ, ಬಿಲ್ ಕಲೆಕ್ಟರ್ ಇಂದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ತಾ.ಪಂ. ಅಧ್ಯಕ್ಷ ಲೋಕೇಶ್, ಮಾಜಿ ತಾ.ಪಂ ಸದಸ್ಯೆ ಸಬಿತಾ ಚೆನ್ನಕೇಶವ, ಮಾಜಿ ಗ್ರಾ.ಪಂ. ಸದಸ್ಯೆ ಶೋಭಾ ಹೊನ್ನಪ್ಪ ,ಕೃಷಿ ಪತ್ತಿನ ಸಂಘದ ಸದಸ್ಯರಾದ ಹೊನ್ನಪ್ಪ ಮತ್ತು ರೋಷನ್, ಮಾಜಿ ಗ್ರಾಂ. ಪಂ. ಸದಸ್ಯ ಮುತ್ತಪ್ಪ, ಕುಮಾರ, ಚೆನ್ನಕೇಶವ ಮತ್ತು ಅಪ್ಪಚ್ಚು ಹಾಜರಿದ್ದರು. -ಸುಕುಮಾರ