(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೨೨: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ಬಿತ್ತಿದ್ದ ಭತ್ತದ ಬೀಜಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿವೆ. ಹಲವು ಭತ್ತದ ಗದ್ದೆಗಳಲ್ಲಿ ಬೀಜಗಳು ಕೊಳೆತು ಹೋಗಿವೆ. ಇದೀಗ ಮಳೆಯ ಅಬ್ಬರ ಕಡಿಮೆಯಾಗಿದ್ದು, ರೈತ ಮರು ಬಿತ್ತನೆಗೆ ತಯಾರಿ ನಡೆಸಿದ್ದಾನೆ. ಇದರಿಂದಾಗಿ ಮುಂದಿನ ೨೦ ದಿನಗಳ ಕಾಲ ಬಿತ್ತನೆ ಮಾಡಿದ ಬೀಜ ಪೈರು ಬರುವ ತನಕ ರೈತ ಕೃಷಿ ಚಟುವಟಿಕೆ ನಡೆಸಲು ಕಾಯಬೇಕಾಗಿದೆ.

ದಕ್ಷಿಣ ಕೊಡಗಿನ ಬಹುತೇಕ ರೈತರ ಭತ್ತದ ಗದ್ದೆಗಳು ಈ ಬಾರಿ ಸುರಿದ ಭಾರೀ ಮಳೆಗೆ ನಷ್ಟಗೊಂಡಿವೆ. ಇದರಿಂದಾಗಿ ಭತ್ತ ಬೆಳೆಯುವ ರೈತ ಮತ್ತೊಮ್ಮೆ ಸಂಕಷ್ಟಕ್ಕೊಳಗಾಗಿದ್ದಾನೆ. ಆದರೂ ತನ್ನ ಭೂಮಿಯನ್ನು ಪಾಳು ಬಿಡಬಾರದೆಂಬ ದೃಢ ಸಂಕಲ್ಪ ತೊಟ್ಟ ರೈತ ೨ನೇ ಬಾರಿಗೆ ತನ್ನ ಭತ್ತದ ಗದ್ದೆಯಲ್ಲಿ ಮರು ಬೀಜ ಬಿತ್ತನೆ ಅಣಿಯಾಗಿದ್ದಾನೆ.

ರೈತ ಸಂಕಷ್ಟದಲ್ಲಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಭತ್ತದ ಕೃಷಿಗೆ ಅಷ್ಟಾಗಿ ಉತ್ತೇಜನ ಲಭಿಸುತ್ತಿಲ್ಲ. ಕಾರ್ಮಿಕರ ವೇತನ ಹೆಚ್ಚಳ, ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಕಿರುಗೂರು, ನಲ್ಲೂರು, ಬಾಳೆಲೆ, ಪೊನ್ನಂಪೇಟೆ, ಪೊನ್ನಪ್ಪಸಂತೆ ಸೇರಿದಂತೆ ಬಹುತೇಕ ರೈತರು ತಮ್ಮ ಭತ್ತದ ಗದ್ದೆಗಳನ್ನು ಪಾಳು ಬಿಡದೆ ಕೃಷಿ ಚಟುವಟಿಕೆ ನಡೆಸುತ್ತಾ ಬರುತ್ತಿದ್ದಾರೆ.

ಇದೀಗ ಕಳೆದೆರಡು ದಿನಗಳಿಂದ ಕೊಡಗಿನಾದ್ಯಂತ ಮಳೆ ಇಳಿಮುಖಗೊಂಡಿರುವುದರಿAದ ಭತ್ತ ಬೆಳೆಯುವ ಕೃಷಿಕರು ಹರ್ಷಚಿತ್ತರಾಗಿದ್ದಾರೆ. ತಮ್ಮ ಭತ್ತದ ಗದ್ದೆಗಳನ್ನು ಮತ್ತೊಮ್ಮೆ ಉಳುಮೆ ಮಾಡಿ ೨ನೇ ಬಾರಿಗೆ ಬೀಜ ಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿಯನ್ನೇ ಆಧಾರವಾಗಿಟ್ಟುಕೊಂಡಿರುವ ಈ ಭಾಗದ ಬಹುತೇಕ ಭತ್ತ ಬೆಳೆಯುವ ರೈತರು ಇದೀಗ ಎರಡನೇ ಬಾರಿ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತನೆ ಮಾಡಲು ತೊಡಗಿಸಿಕೊಂಡಿದ್ದಾರೆ.