ನಾಪೋಕ್ಲು, ಜು. ೨೧: ಮದೆನಾಡು ಗ್ರಾಮದ ಸಾಲಾಪು ಸಮೀಪದ ಪಟ್ಟಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಶನಿವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿದೆ. ಬಾಳೆ, ಅಡಿಕೆ, ತೆಂಗು, ಕಾಫಿ ಗಿಡಗಳನ್ನು ತುಳಿದು ಧ್ವಂಸ ಮಾಡಿ ನಷ್ಟ ಮಾಡಿವೆ. ಕಾಡಾನೆಗಳ ಹಿಂಡು, ಜನ ವಸತಿ ಸಮೀಪದಲ್ಲೇ ಹಾದು ಹೋಗಿರುವುದರಿಂದಾಗಿ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಗೆ ಹೋಗಲು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆಯವರು ಹಾಗೂ ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಶನಿವಾರ ರಾತ್ರಿ ಪಟ್ಟಡ ಪುರುಷೋತ್ತಮ, ಪಟ್ಟಡ ಲಲಿತ, ಪಟ್ಟಡ ಧನಂಜಯ ಅವರಿಗೆ ಸೇರಿದ ತೋಟಗಳನ್ನು ಕಾಡಾನೆಗಳು ನಾಶ ಪಡಿಸಿವೆ.
ಪಟ್ಟಡ ಕುಟುಂಬಸ್ಥರ ತೋಟಗಳಿಗೆ ಗುಂಪು ಆನೆಗಳು ದಾಳಿ ಮಾಡಿದ್ದು, ಕಾಫಿ ಬೆಳೆಗೆ ನಷ್ಟವಾಗಿದೆ. ಕಾಫಿಯ ಗಿಡಗಳ ರೆಂಬೆಗಳನ್ನು ಮುರಿದು ಹಾಕಿವೆ. ೩೦ ವರ್ಷದ ಫಲಭರಿತ ತೆಂಗು, ಬಾಳೆಗಳನ್ನು ತುಳಿದು ನಾಶಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ದುಗ್ಗಳ ಸದಾನಂದ