ಕುಶಾಲನಗರ, ಜು. ೨೧: ಕುಶಾಲನಗರದ ನಂ. ೧೯೭೨೨ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ೨೦೨೩ -೨೪ ರಲ್ಲಿ ೪೧೨.೭೧ ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ನಡೆಸಿದ್ದು, ರೂ ೩.೦೪ ಕೋಟಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದರು.
ಸಂಘದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿ ಶೇ. ೯೫.೧೨ ರಷ್ಟು ಆಗಿದೆ. ೨೦೨೨-೨೩ನೇ ಸಾಲಿನಲ್ಲಿ ೧,೩೦೫ ಸದಸ್ಯರಿಂದ ರೂ. ೩.೪೫ ಕೋಟಿ ಪಾಲು ಬಂಡವಾಳ ಸಂಗ್ರಹಿಸಿದ್ದು, ಸದರಿ ೧,೩೫೫ ಸದಸ್ಯರನ್ನು ಹೊಂದಿದೆ.
ಪಾಲು ಬಂಡವಾಳ ರೂ. ೩.೨೨ ಕೋಟಿ ಸಂಗ್ರಹಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ರೂ. ೫೯.೩೬ ಕೋಟಿ ಠೇವಣಿ ಸ್ವೀಕರಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ರೂ. ೩.೩೧ ಕೋಟಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಸಂಘದ ದುಡಿಯುವ ಬಂಡವಾಳವು ರೂ. ೭೦.೩೫ ಕೋಟಿಯಿಂದ ರೂ. ೭೯.೩೮ ಕೋಟಿಗೆ ಏರಿದೆ.
ಸಂಘದಲ್ಲಿ ವಿವಿಧ ಠೇವಣಿಗಳಿಂದ ರೂ. ೭.೭೭ ಕೋಟಿ ಸಂಗ್ರಹವಿದ್ದು, ಇದರಲ್ಲಿ ಕ್ಷೇಮ ನಿಧಿ ರೂ. ೨.೮೮ ಕೋಟಿ, ನಿವೇಶನ ಮತ್ತು ಕಟ್ಟಡ ಖರೀದಿ ನಿಧಿ ರೂ. ೨.೦೭ ಕೋಟಿ, ಮರಣ ನಿಧಿ ರೂ. ೩೦.೧೪ ಲಕ್ಷ ಹಾಗೂ ಇತರೇ ನಿಧಿಗಳು ರೂ. ೨.೫೨ ಕೋಟಿ ಇದೆ ಎಂದು ಮಾಹಿತಿ ಒದಗಿಸಿದರು.
ಸಂಸ್ಥೆಯಿAದ ವನಸಿರಿ ಯೋಜನೆಯಡಿ ವಿವಿಧ ಸ್ಥಳಗಳಲ್ಲಿ ೫೦೦ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಕಳೆದ ೨ ವರ್ಷಗಳಿಂದ ಹಲವು ಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಕೂಡ್ಲೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಬಾಕಸ್ ಪುಸ್ತಕ ಮತ್ತು ಸಾಮಗ್ರಿಗಳನ್ನು ನೀಡಲು ರೂ. ೪೦ ಸಾವಿರ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಸಂಘವು ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಶಿಕ್ಷಕರುಗಳ ಕೋರಿಕೆಯಂತೆ ಎರಡು ಕಡೆಗಳಲ್ಲಿ ಅಂದಾಜು ರೂ. ೪ ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಒಬ್ಬ ಸದಸ್ಯನಿಗೆ ಗರಿಷ್ಠ ರೂ. ೨.೧೦ ಕೋಟಿ ಸಾಲ ನೀಡಲು ಅವಕಾಶವಿದೆ. ಸಹಕಾರ ಸಂಘದ ಇತಿಹಾಸದಲ್ಲಿ ಇದು ದಾಖಲೆ ಎಂದು ಶರವಣ ಅವರು ತಿಳಿಸಿದರು.
ಸಂಸ್ಥೆಯಲ್ಲಿ ವಾಹನ, ಕೈಗಾರಿಕೆ, ಮನೆ ನಿರ್ಮಾಣಕ್ಕೆ, ನಿವೇಶನ ಖರೀದಿಗೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ, ಮಹಿಳೆಯರಿಗೆ ಸ್ವಸಹಾಯ ಸಂಘಗಳ ಸಾಲವನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಸುಭದ್ರವಾದ ಅಡಿಪಾಯದೊಂದಿಗೆ ಚಿಟ್ಫಂಡ್ ಕೂಡ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಶರವಣಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ನಿರ್ದೇಶಕರಾದ ಎಂ.ಎA. ಶಾಹಿರ್, ಎನ್.ಇ. ಶಿವಪ್ರಕಾಶ್, ಎಂ.ವಿ. ನಾರಾಯಣ, ವಿ.ಸಿ. ಅಮೃತ್, ಎಲ್. ನವೀನ್, ಕೆ.ಪಿ. ಶರತ್, ಕವಿತಾ, ಕೃತಿಕಾ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಕೆ.ಎನ್. ಸುರೇಶ್, ಆರ್.ಕೆ. ನಾಗೇಂದ್ರ ಬಾಬು, ಸಿಇಓ ಬಿ.ಡಿ. ಶ್ರೀಜೇಶ್ ಮತ್ತು ವ್ಯವಸ್ಥಾಪಕ ಆರ್. ರಾಜು ಉಪಸ್ಥಿತರಿದ್ದರು.