ಸುಂಟಿಕೊಪ್ಪ, ಜು. ೨೧: ಆನೆ ಮಾನವ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಸದ್ಯದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದರು.

ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಗಾರರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿನ ಸಭೆಯಲ್ಲಿ ಮಾತನಾಡಿದ ಅವರು, ಆನೆಗಳನ್ನು ಓಡಿಸುವ ಸಂದರ್ಭದಲ್ಲಿ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭ ದಲ್ಲಿ ಬೇಕಾಗುವ ಆ್ಯಂಬ್ಯುಲೆನ್ಸ್ ಒದಗಿಸುವ ಬಗ್ಗೆ ಘೋಷಣಿ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಈಗಾಗಲೇ ಆನೆ ಓಡಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು. ಯಾವುದೇ ಸಂದರ್ಭದಲ್ಲಿ ಮಾನವ ಜೀವಹಾನಿ ಆಗಬಾರದು ಎಂಬುದು ನಮ್ಮ ಕಾಳಜಿಯಾಗಿದ್ದು, ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆರ್‌ಆರ್‌ಟಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದರು.

ಈಗಾಗಲೇ ವೀರಾಜಪೇಟೆ ಮತ್ತು ಮಡಿಕೇರಿ ವಿಭಾಗದಲ್ಲಿ ಕ್ರಮವಾಗಿ ೧೩೦ ಮತ್ತು ೬೫ ಆನೆಗಳು ಪತ್ತೆಯಾಗಿದ್ದು, ಇದರಲ್ಲಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಕೇವಲ ೫ ಅನೆಗಳು ಅರಣ್ಯದಲ್ಲಿದ್ದರೆ, ೧೨೫ ಆನೆಗಳು ತೋಟಗಳಲ್ಲಿ ಬೀಡುಬಿಟ್ಟಿವೆ. ಅದೇ ರೀತಿ ಮಡಿಕೇರಿ ವಿಭಾಗದಲ್ಲಿ ೨೫ ಅನೆಗಳು ಕಾಡಿನಲ್ಲಿದ್ದರೆ ಉಳಿದ ಆನೆಗಳು ತೋಟಗಳಲ್ಲಿ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಮಾತನಾಡಿ, ಈ ರೀತಿಯ ಸಭೆಗಳು ಸಾಕಷ್ಟು ನಡೆದಿದ್ದು, ಯಾವುದೇ ಪರಿಹಾರ ಸಿಕ್ಕಿಲ್ಲ. ಕೇವಲ ಅಂದಿನ ಸಭೆ ಅಂದಿಗೆ ಎಂಬ ವ್ಯವಸ್ಥೆಯನ್ನು ನಾವು ಕಾಣುತ್ತಿದ್ದು, ಸಭೆಯ ತೀರ್ಮಾನಗಳು ಯಾಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಕಾಫಿ ಬೆಳೆಗಾರ ಶ್ರೀನಾಥ್ ಮಾತನಾಡಿ, ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಬೇಕು. ಆರಣ್ಯ ಭವನದಲ್ಲಿ ಅಥವಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆಗೆ ನಮಗೂ ಪ್ರಾತಿನಿಧ್ಯ ಬೇಕು. ಪ್ರಾಣಿ ಪ್ರಿಯರು ಮತ್ತು ಪರಿಸರವಾದಿಗಳು, ಸ್ವಯಂಸೇವಾ ಸಂಸ್ಥೆಗಳು ನಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸಬೇಕೆ ಹೊರತು ಅವರಷ್ಟಕ್ಕೆ ಸಭೆಗಳನ್ನು ಮಾಡಿಕೊಂಡು ಸಲಹೆಗಳನ್ನು ನೀಡುವುದು ಸರಿಯಲ್ಲ ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೆ-ಮಾನವ ಸಂಘರ್ಷದ ಕುರಿತು ಇಲಾಖೆ ಜನಪ್ರತಿನಿಧಿಗಳು ಮತ್ತು ಕೊಡಗು ವನ್ಯಜೀವಿ ಸಂಸ್ಥೆಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾವನೆಗಳನ್ನು ಇಲಾಖೆಯ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.

ಕೆದಕಲ್ ಗ್ರಾ.ಪಂ. ಸದಸ್ಯ ಜಿ.ಡಿ. ಶಿವಶಂಕರ್ ಮಾತನಾಡಿ, ಆನೆ- ಮಾನವ ಸಂಘರ್ಷ ಪರಿಹರಿಸಲಾಗದ ಮಟ್ಟಕ್ಕೆ ಬೆಳೆದಿದ್ದು, ಆನೆ ಹಾವಳಿ ಸಂತ್ರಸ್ತರಾದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಜತೆಗೆ ಮೂರು ತಿಂಗಳಿಗೊಮ್ಮೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಕೊಡಗರಹಳ್ಳಿ, ಕಂಬಿ ಬಾಣೆ, ನಾಕೂರು ಶಿರಂಗಾಲ, ಕೆದಕಲ್, ಹೊರೂರು, ಕಾರೆಕೊಲ್ಲಿ, ಭೂತನಕಾಡು, ಮತ್ತಿಕಾಡು ಚೌಡಿಕಾಡು ವ್ಯಾಪ್ತಿಯಲ್ಲಿನ ಕಾಫಿ ಬೆಳೆಗಾರರು ಪಾಲ್ಗೊಂಡು ಸಮಸ್ಯೆಗಳನ್ನು ವಿವರಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿ. ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಆರ್‌ಆರ್‌ಟಿ ತಂಡದ ಮುಖ್ಯಸ್ಥ, ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ಧರಾಮ, ಎಸ್.ಐ. ಸ್ವಾಮಿ, ಎಎಸ್‌ಐ ತೀರ್ಥಕುಮಾರ್ ಮತ್ತಿತರರಿದ್ದರು.