ಸಿದ್ದಾಪುರ, ಜು. ೨೦: ನಿಧಿಯ ಆಸೆಗೆ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧನೆ ಮಾಡಿದ ಆರು ಮಂದಿಯ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಎಂ.ಜಿ. ಕಾಲೋನಿ ನಿವಾಸಿ ಆಸಿಫ್ (೩೦) ಎಂಬಾತ ಹಣದ ಆಸೆಗೆ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಸಿಕ್ಕಿ ಹಾಕಿಕೊಂಡವನಾಗಿದ್ದಾನೆ.

ಬAಧಿತ ಯುವಕನ ಮನೆಯಲ್ಲಿ ಪ್ರತಿನಿತ್ಯ ನಾಗರಹಾವು ಕಾಣಿಸುತ್ತಿದ್ದು ಈ ವಿಚಾರವನ್ನು ತನ್ನ ಸ್ನೇಹಿತನಾದ ಮೂರ್ನಾಡಿನ ಅತೀಕ್ ಎಂಬವರ ಬಳಿ ಹೇಳಿದ ಹಿನ್ನೆಲೆಯಲ್ಲಿ ಆತ ಕಾಸರಗೋಡಿನಿಂದ ಓರ್ವ ಉಸ್ತಾದ್‌ರನ್ನು ಕರೆತಂದು ಪ್ರಾರ್ಥನೆ ಮಾಡಿದ ಸಂದರ್ಭದಲ್ಲಿ ಆತ ಯುವಕನ ಮನೆಯ ಮೂರನೇ ಕೋಣೆಯಲ್ಲಿ ನಿಧಿ ಇದ್ದು, ಆ ಕಾರಣದಿಂದ ಹಾವು ಬರುತ್ತಿರುವುದಾಗಿ ಹೇಳಿದ್ದಾನೆ. ಶ್ರೀಮಂತನಾಗುವ ಬಯಕೆಯಲ್ಲಿ ಕುಶಾಲನಗರದ ಹಂಸ ಎಂಬಾತನ ನೆರವಿನೊಂದಿಗೆ ನಿಧಿ ಶೋಧಕ ಯಂತ್ರವನ್ನು ಹೊಂದಿರುವ ವ್ಯಕ್ತಿಯನ್ನು ಕರೆ ತಂದು ಪರಿಶೀಲಿಸಿದ ಸಂದÀರ್ಭದಲ್ಲಿ ಮೂರನೇ ಕೋಣೆಯಲ್ಲಿ ನಿಧಿ ಇರುವುದಾಗಿ ಯಂತ್ರದ ಪರಿಶೋಧನೆಯಲ್ಲಿ ಕಂಡು ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತಡ ಮಾಡದೇ ಕೋಣೆಯಲ್ಲಿ ಗುಂಡಿ ತೋಡಲು ಪ್ರಾರಂಭಿಸಿದ್ದಾನೆ. ತದ ನಂತರ ಯಂತ್ರದಲ್ಲಿ ತಪಾಸಣೆ ಮಾಡಿದಾಗ ನಿಧಿ ಇರುವ ಬಗ್ಗೆ ಯಾವುದೇ ಶಬ್ದ ಬಾರದ ಹಿನ್ನೆಲೆಯಲ್ಲಿ ವ್ಯಕ್ತಿಗಳು ತೆರಳಿದ್ದಾರೆ. ಈ ವಿಚಾರವನ್ನು ಕುಶಾಲನಗರದ ಆರೀಫಾ ಮತ್ತು ಮಡಿಕೇರಿಯ ಫಾಹಿದ್ ಎಂಬವರ ಬಳಿ ಹೇಳಿದ ಹಿನ್ನೆಲೆಯಲ್ಲಿ ಮಾಟ, ಮಂತ್ರ ಮಾಡಿದರೆ ನಿಧಿ ಸಿಗಲಿದೆ ಎಂದು ಯುವಕನನ್ನು ನಂಬಿಸಿ ಮಾಟ, ಮಂತ್ರ ಮಾಡಿಸಲೆಂದು ತಮಿಳುನಾಡಿನಿಂದ ಕರ್ಪಸಾಮಿ ಹಾಗೂ ಆತನೊಂದಿಗೆ ಮೂವರನ್ನು ಯುವಕನ ಮನೆಗೆ ಕರೆ ತಂದಿದ್ದಾರೆ. ಪೂಜೆ ಮಾಡಲು ಸಿದ್ಧತೆಗಳು ನಡೆದಿದ್ದು ೩೫ ದಿನಗಳ ನಿರಂತರ ಪೂಜೆಯ ನಂತರ, ಸ್ಥಳದಲ್ಲಿ ಕೋಳಿಯನ್ನು ಬಲಿ ನೀಡಿದರೆ ನಿಧಿ ಸಿಗಲಿದೆ ಎಂದು ವ್ಯಕ್ತಿಯು ಹೇಳಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಪೂಜೆಗಳು ನಡೆಯ ತೊಡಗಿತ್ತು. ಅಕ್ರಮವಾಗಿ ನಿಧಿ ಶೋಧ ನಡೆಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ ಸಂದರ್ಭದಲ್ಲಿ ಮನೆಯ ಕೋಣೆಯ ಒಳಗಡೆ ಗುಂಡಿ ತೋಡಿರುವುದು ಹಾಗೂ ಪೂಜೆ ನಡೆಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸಿಫ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ನಿಧಿಯ ಆಸೆಗೆ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಕ್ರಮ ಚಟುವಟಿಕೆ ಪ್ರಕರಣದಲ್ಲಿ ಭಾಗಿಯಾದ ಒಟ್ಟು ೬ ಮಂದಿಯ ಮೇಲೆ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಅಧಿ ನಿಯಮ ೨೦೧೭ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬAಧ ಪೊಲೀಸರು ಐವರನ್ನು ಬಂಧಿಸಿದ್ದು ಓರ್ವ ತಲೆಮರೆಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ರಾಜು ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘ ವೇಂದ್ರ ಹಾಗೂ ಸಿಬ್ಬಂದಿಗಳು ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.

-ವಾಸು