ಶ್ರೀ ಗುರುವೇ ನನಗೆ ನಮಸ್ಕಾರ. ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದೂ ಕರೆಯುವರು. ಪೂರ್ಣ ಪ್ರಮಾಣದ ಗುರುವಾಗಿ ವೇದಗಳ ಮಹಿಮೆಯನ್ನು ತಿಳಿಸುತ್ತಾ, ಜ್ಞಾನದ ಮಾರ್ಗದರ್ಶಕರಾದವರು ವ್ಯಾಸ ಮಹರ್ಷಿ. ದೇವತೆಗಳ ಪ್ರಾರ್ಥನೆಯಂತೆ ಪರಮಾತ್ಮನು ವೇದಗಳ ವಿಭಾಗಕ್ಕಾಗಿ ಜನಿಸಿದರೆಂದು ಭಾಗವತದಲ್ಲಿ ಉಲ್ಲೇಖವಿದೆ. ವೇದ ಎಂದರೆ ಜ್ಞಾನ ಎಂದರ್ಥ. ಈ ಜ್ಞಾನವೇ ಭಾರತೀಯ ಸಂಸ್ಕೃತಿಯ ತಳಹದಿ. ಈ ನಮ್ಮ ಸಂಸ್ಕೃತಿ ದಡಗಳೇ ಇಲ್ಲದ ಸಾಗರದಷ್ಟು ವಿಸ್ತಾರ, ಆಕಾಶದಷ್ಟು ವಿಶಾಲ. ಈ ಅಖಂಡವಾದ ವೇದ ರಾಶಿಯನ್ನು ನಾಲ್ಕು ಭಾಗಗಳಾಗಿ ಮಾಡಿದ್ದರಿಂದ ವ್ಯಾಸ ಎಂದು ಹೆಸರಾಯಿತು ಎಂಬ ಪ್ರತೀತಿಯಿದೆ.
ವೇದದ ಛಂದೋಬದ್ಧ ವಾಕ್ಯಗಳನ್ನು ಸಂಗ್ರಹಿಸಿ ಋಗ್ವೇದವನ್ನೂ, ಗದ್ಯರೂಪದ ಭಾಗಗಳನ್ನು ಆಯ್ದು ಯಜುರ್ವೇದವನ್ನೂ ಗಾನಕ್ಕೆ ಅಳವಡಿಸಿದ ಛಂದೋಬದ್ಧ ಭಾಗಗಳನ್ನು ಆಯ್ದು ಸಾಮವೇದವನ್ನೂ ರಾಜ್ಯಾಭಿಷೇಕವೇ ಮೊದಲಾದ ಕಾರ್ಯಗಳಲ್ಲಿ ಬಳಸಲಾಗುವ ಪೀಡಾ ಪರಿಹಾರದ ಭಾಗವನ್ನು ಸೇರಿಸಿ ಅಥರ್ವವೇದವನ್ನು ರಚಿಸಿ ವ್ಯಾಸರು ನಾಮಕರಣ ಮಾಡಿದರು. ಜ್ಞಾನವು ಜ್ಞಾನವನ್ನೇ ಹೆಚ್ಚಿಸುತ್ತದೆ, ಅಜ್ಞಾನವು ಅಜ್ಞಾನವನ್ನೇ ಹೆಚ್ಚಿಸುತ್ತಾ ಹೋಗುತ್ತದೆ. ಒಮ್ಮೆ ಜ್ಞಾನ ತುಂಬಿದಲ್ಲಿ ಮತ್ತೊಂದೂ ಅಜ್ಞಾನ ತುಂಬುವುದಿಲ್ಲ. ಜ್ಞಾನದ ಕೊಡವನ್ನು ಸದಾ ತುಂಬಿಸಬೇಕು. ಜ್ಞಾನ ಎಲ್ಲಿ ಇಲ್ಲವೋ ಅಲ್ಲಿ ಅಂಧಕಾರವಿರುತ್ತದೆ. ನಮ್ಮನ್ನು ನಾವು ಅರಿಯುವುದೇ ಮೊದಲ ಜ್ಞಾನ. ನಮಗೆ ಯಾವ ಯಾವ ಮೂಲಗಳ ಜ್ಞಾನವಿರಬೇಕು, ಎಲ್ಲಿ ದೌರ್ಬಲ್ಯಗಳಿವೆ ಅದರ ನಿವಾರಣೆ ಹೇಗೆ ಎಂಬೆಲ್ಲ ಜ್ಞಾನವನ್ನು ಈ ವೇದಗಳು ತಿಳಿಸುತ್ತವೆ. ಈ ವೇದಗಳ ಮಹಿಮೆಯನ್ನು ವಿವರಿಸಿ ಜ್ಞಾನಧಾರೆಯನ್ನು ಹರಿಸಿ ಗುರುವಿನ ಮಹಿಮೆಯನ್ನು ಸಾರಿದರು ಈ ವ್ಯಾಸ ಮಹರ್ಷಿಗಳು.
ಗುರುವೆಂದರೆ ಬೆಳಕು, ಗುರುವೆಂದರೆ ಸನ್ಮಾರ್ಗ, ಗುರುವೆಂದರೆ ಸತ್ಯದರ್ಶನ. ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಜೀವನದ ಅಮರತ್ವದೆಡೆಗೆ ನಡೆಸುವಾತ ಗುರು. ನದಿ ಹರಿಯುತ್ತಾ ಸಾಗರದೆಡೆಗೆ ಸಾಗುವಾಗ ತನ್ನೆಡೆಗೆ ಬಂದುದೆಲ್ಲವನ್ನು ಸರೋವರದತ್ತ ಕೊಂಡೊಯ್ಯುವAತೆ ಒಬ್ಬ ಗುರುವೂ ತನ್ನನ್ನು ಅನುವರ್ತಿಸುವ ಶಿಷ್ಯನನ್ನು ಜ್ಞಾನ ಮಾರ್ಗದತ್ತ ನಡೆಸಿ ಸತ್-ಚಿತ್ ಆನಂದದ ಅನಂತದಲ್ಲಿ ಒಂದಾಗಿಸುತ್ತಾನೆ. ಹೂವು ಯಾವ ಷರತ್ತೂ ಇಲ್ಲದೆ ಪರಿಸರಕ್ಕೆ ತನ್ನ ಕಂಪನ್ನು ಸೂಸಿ ಸುಗಂಧಮಯವಾಗಿಸುವAತೆ ಒಬ್ಬ ಗುರುವೂ ಯಾವ ಷರತ್ತು ಇಲ್ಲದೆ ಜ್ಞಾನಧಾರೆಯ ಕಂಪನ್ನು ಹರಿಯಿಸುತ್ತಾನೆ.
ಗುರು ಶಿಷ್ಯ ಸಂಬAಧ ಗಾಢವಾದದ್ದು
ಓಂ ಸಹನಾ ಭವತು, ಸಹನಾ ಭುನಕ್ತು, ಸಹವೀರ್ಯಂ ಕರವಾವ ಹೈ
ತೇಜಸ್ವಿನಾವ ಧೀತಮಸ್ತು ಮಾ ವಿದ್ವಿಷಾವ ಹೈ’ ಅಂದರೆ ಗುರು ಶಿಷ್ಯರಾದ ನಮ್ಮನ್ನು ಜೊತೆಯಲ್ಲಿ ರಕ್ಷಿಸಲಿ, ಜೊತೆಯಲ್ಲಿಯೇ ಪೋಷಿಸಲಿ, ನಾವಿಬ್ಬರೂ ಜೊತೆಯಲ್ಲಿಯೇ ವೀರ್ಯವತ್ತಾದ ಕಾರ್ಯವನ್ನು ಮಾಡುವಂತಾಗಲಿ. ನಾವುಗಳು ದ್ವೇಷಿಸದೆ ಇರುವಂತಾಗಲಿ ಎನ್ನುವ ಸದಾಶಯ, ಆತ್ಮೀಯತೆ ಗೋಚರಿಸುತ್ತದೆ.
ಗುರುವಿನಲ್ಲಿ ಇರುವ ಪ್ರಥಮ ಆದ್ಯತೆ ಕೃತಜ್ಞತೆ. ಆಚಾರಕ್ಕೆ ಅರಸನಾಗುವುದು. ನೀತಿಗೆ ಪ್ರಭುವಾಗುವುದು ಗುರುವಿನ ಲಕ್ಷಣ. ಗುರುವು ಪರಬ್ರಹ್ಮ, ಗುರುವು ವಿಷ್ಣು ಸಮಾನ, ಗುರುವು ಮಹೇಶ್ವರನಂತೆ ಶಿವ ಸ್ವರೂಪಿ ಎನ್ನುತ್ತದೆ ಸನಾತನ ಧರ್ಮ.
ಗಣಿಯೊಳಗಿನ ಮಣ್ಣು ಮಿಶ್ರಿತ ಚಿನ್ನದ ತುಂಡುಗಳಿಗೆ ರೂಪು, ಹೊಳಪು ನೀಡಿ ಸಂಸ್ಕರಿಸಿ ಬೆಲೆಬಾಳುವಂತೆ ಮಾಡುವ ಅಕ್ಕಸಾಲಿಗನಂತೆ, ಗುರುವಾದವನು ತನ್ನ ಶಿಷ್ಯನನ್ನು ತಿದ್ದಿ-ತೀಡಿ ಉತ್ತಮ ಸಂಸ್ಕಾರ ನೀಡಿ ಮಾನವನನ್ನಾಗಿಸುವನು. ಈ ಗುರು ಭಾವ ಸರ್ವವ್ಯಾಪಿ. ಆಗತಾನೆ ಅಂಬೆಗಾಲಿಡುತ್ತಾ ನಡೆದಾಡುವ ಕಂದಮ್ಮನಿಗೆ ಮನೆಯದುವೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು.
ಈ ಗುರುವಿನ ನಿಂದೆ ಮಹಾ ಪಾಪ - ಎಂಬ ಮಾತನ್ನು ನಾವು ಕೇಳಿದ್ದೇವೆ. ಯಾವ ನಿಂದೆ ಸಂಶಯಗಳಿಲ್ಲದೆ ಗುರೂಪದೇಶಕ್ಕೆ ಬದ್ಧನಾದವನು ಬದುಕಿನಲ್ಲಿ ಎತ್ತರೆತ್ತರಕ್ಕೇರುತ್ತಾನೆ.
ಇಂದು ನಾವು ಸಮಾಜದಲ್ಲಿ ಕಾಣುವ ಎಲ್ಲ ಮಹಾನ್ ವ್ಯಕ್ತಿಗಳ ಏಳಿಗೆಯ ಹಿಂದೆ ಒಬ್ಬ ಗುರುವಿದ್ದಾನೆ. ವಿಜ್ಞಾನಿ, ವೈದ್ಯ, ಸಂಗೀತಗಾರ, ತಂತ್ರಜ್ಞ, ಅನುಭವಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಮುಂದೆ ಗುರಿಯಿತ್ತು ಹಿಂದೆ ಗುರುವಿದ್ದ.
ಪುರಾಣ ಕಾಲದಿಂದಲೂ, ರಾಜಾಧಿರಾಜರಿಗೂ, ಅನುಭವಿಗಳಿಗೂ ಈ ಗುರುವೇ ಆಧಾರಸ್ತಂಭ. ಎಲ್ಲ ವಿದ್ಯೆಗಳೂ ಗುರುಮುಖದಿಂದ ಲಭ್ಯವಾದರೆ ಶೋಭಾಯಮಾನ. ವೀರ ವೇದಾಂತಿ, ಭಾರತಾಂಬೆಯ ವೀರಪುತ್ರ ವಿವೇಕಾನಂದರಿಗೊಬ್ಬ ರಾಮಕೃಷ್ಣ, ಶ್ರೀ ಕೃಷ್ಣನಿಗೆ ಸಾಂದೀಪನಿ ಋಷ್ಯಾಶ್ರಮ, ಮಹಾಭಾರತದ ದ್ರೋಣಾಚಾರ್ಯ, ರಾಮಾಯಣದ ವಿಶ್ವಾಮಿತ್ರ ವಸಿಷ್ಠರು ಮಹಾ ಗುರುಗಳಾಗಿ ಜ್ಞಾನಮಾರ್ಗ ತೋರಿದವರು. ಇಂದು ವಿಜ್ಞಾನ ತಂತ್ರಜ್ಞಾನ ಬೆಳೆದು ಬಂದAತೆಲ್ಲ ಈ ಗುರು - ಶಿಷ್ಯ ಸಂಬAಧ ಸಡಿಲಗೊಳ್ಳುತ್ತಿದೆ. ಗುರುವೇ ನಮಃ ಎನ್ನುತ್ತಿದೆ. ಬಾಯಲ್ಲಿ ಗುರುವೇನು ಮಹಾ ಎಂಬ ಉಕ್ತಿ ವ್ಯಾಪಕವಾಗುತ್ತಿದೆ. ಗುರುವಿನ ಘನತೆ ಅರಿಯದಂತಾಗಿದೆ.
‘ಹರಮುನಿದರೆ ಹರಿಕಾಯ್ವ, ಹರಿಮುನಿದರೆ ಹರಕಾಯ್ವ, ಗುರುಮುನಿದರೆ ಕಾಯ್ವವರುಂಟೇ’ ಎನ್ನುವ ಮಹಿಮೆ ಅರಿಯದಂತಾಗಿದೆ. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಗುರು ಪೂರ್ಣಿಮೆಯ ಮಹತ್ವದ ದಿನದಂದು ಪ್ರತಿಯೊಬ್ಬನ ಶ್ರದ್ಧೆ, ಭಕ್ತಿ, ಅನನ್ಯತೆ ಸಲ್ಲಿಕೆಯಾಗಲಿ. ಗುರು ಪರಂಪರೆ ಸದಾ ನೀತಿಯುತವಾಗಿ ಪ್ರಜ್ವಲಿಸಲಿ.
- ಕಟ್ಟೇರ ಸುಶೀಲಾ ಅಚ್ಚಪ್ಪ, ಶ್ರೀಮಂಗಲ. ಮೊ. ೯೪೪೯೦೭೫೩೫೧.