ವೀರಾಜಪೇಟೆ, ಜು. ೨೦: ವೀರಾಜಪೇಟೆಯ ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹಾನಿಗೊಳಗಾದ ರಸ್ತೆಯನ್ನು ಸಾಧ್ಯವಾದಷ್ಟು ಬೇಗ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಲೆತಿರಿಕೆ ಬೆಟ್ಟದ ನಿವಾಸಿಗಳಿಗೆ ಮಳೆಗಾಲದಲ್ಲಿ ತೊಂದರೆ ಆಗುತ್ತಿರುವ ಕಾರಣ ಅವರಿಗೆ ಪುರಸಭೆ ಅಂಬಟ್ಟಿಯಲ್ಲಿ ಸುಮಾರು ಏಳು ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಅದರಲ್ಲಿ ನೂರ ಐವತ್ತು ಮನೆಯನ್ನು ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರ ಕುಮಾರ್ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದರು. ನಂತರ ನೆಹರು ನಗರ ಮತ್ತು ಗೋಣಿಕೊಪ್ಪ ರಸ್ತೆಯ ರಾಜ ಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದರು.
ಉಸ್ತುವಾರಿ ಸಚಿವ ಬೋಸರಾಜು ಮಾತನಾಡಿ, ನದಿ ತೀರದ ಮತ್ತು ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಿಕೊಡಲಾಗುವುದೆಂದು ತಿಳಿಸಿದರು. ಅಲ್ಲದೆ ಪುನರ್ವಸತಿ ಕಲ್ಪಿಸಿದ ನಂತರ ಯಾವುದೇ ಕಾರಣಕ್ಕೂ ನದಿ ತೀರದಲ್ಲಿ ಹೊಸ ಮನೆ ಸೇರಿದಂತೆ ಯಾವುದೇ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಬದಲಿಗೆ ನದಿ ತೀರದಿಂದ ಸ್ಥಳಾಂತರ ಮಾಡಿದ ನಂತರ ನದಿ ತೀರದಲ್ಲಿರುವ ಮನೆಗಳನ್ನು ಕೆಡವಲಾಗುವುದು ಎಂದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ, ನದಿ ತೀರದ ಹಾಗೂ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಪುನರ್ವಸತಿಗಾಗಿ ಜಾಗ ಗುರುತಿಸಲಾಗಿದ್ದು, ಆ ಜಾಗಕ್ಕೆ ಎಲ್ಲರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ನದಿ ತೀರದ ನಿವಾಸಿಗಳಿಗೆ ಸಮಸ್ಯೆಗಳು ಆಗದ ರೀತಿಯಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಿ ಸೂರು ಕಲ್ಪಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾದಿಕಾರಿ ರಾಮರಾಜನ್, ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಡಿ.ಪಿ. ರಾಜೇಶ್, ರಜನೀಕಾಂತ್, ಜಲೀಲ್, ಪಸಿಹ ತಬಸುಂ, ಮತೀನ್, ದೇಚಮ್ಮ, ತಹಶೀಲ್ದಾರ್ ರಾಮಚಂದ್ರ, ಕಂದಾಯ ಪರಿವೀಕ್ಷಕ ಹರೀಶ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ, ಧರ್ಮಜ ಉತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಸಲಾಂ, ಶಭರೀಶ್, ಕೆ.ಬಿ. ಶಾಂತಪ್ಪ, ವಕೀಲ ನರೇಂದ್ರ ಕಾಮತ್, ಮಂಜು, ಸಂತೋಷ್, ಕಿಶೋರ್, ಪುರಸಭೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿ ವರ್ಗದವರು, ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.