ಸಿದ್ದಾಪುರ, ಜು. ೨೧: ಕಾಡಾನೆಗಳ ಹಿಂಡು ಶಾಲಾ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿ ಗಿಡಮರಗಳನ್ನು ಧ್ವಂಸಗೊಳಿಸಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಗೇಟನ್ನು ತೆರೆದು ಕಾಡಾನೆಗಳ ಹಿಂಡು ಆವರಣದೊಳಗೆ ಲಗ್ಗೆ ಇಟ್ಟು ಅಲ್ಲಿದ್ದ ತೆಂಗಿನ ಮರಗಳನ್ನು ಎಳೆದು ಹಾಕಿ ನಾಶಗೊಳಿಸಿವೆ. ಅಲ್ಲದೆ ಶಾಲೆಯ ಮುಂಭಾಗದಲ್ಲಿದ್ದ ಹಣ್ಣಿನ ಗಿಡಗಳನ್ನು, ಹೂ ಗಿಡಗಳನ್ನು ಮನಬಂದAತೆ ತುಳಿದು ಹಾಕಿದೆ.

ಅದೃಷ್ಟವಶಾತ್ ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತಗಳು ತಪ್ಪಿದೆ. ಈ ಹಿಂದೆ ಕೂಡ ಇದೇ ಶಾಲೆಯ ಆವರಣದೊಳಗೆ ಮರಿ ಆನೆಗಳೊಂದಿಗೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದ್ದವು. ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಮನೆಯ ಅಂಗಳದಲ್ಲಿ ಲಗ್ಗೆ ಇಡುತ್ತಿವೆ. ಮನೆಯ ಸುತ್ತಮುತ್ತಲಿನಲ್ಲಿ ಓಡಾಡುತ್ತಿರುವ ಕಾಡಾನೆಗಳು ಹೂ ಕುಂಡಗಳನ್ನು ಕೂಡ ತುಳಿದು ನಾಶಗೊಳಿಸುತ್ತಿವೆ.

ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಫಸಲುಗಳು ನಾಶಗೊಳ್ಳುತ್ತಿದ್ದು ನೆಮ್ಮದಿ ಇಲ್ಲದಂತಾಗಿದೆ ಎಂದು. ಗುಹ್ಯ ಗ್ರಾಮದ ಕಾಫಿ ಬೆಳೆಗಾರರಾದ ನಡಿಕೇರಿಯಂಡ ಪೊನ್ನಪ್ಪ ತಿಳಿಸಿದ್ದಾರೆ. ಕೂಡಲೇ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಹಾಗೂ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. -ವಾಸು