ಮುಳ್ಳೂರು, ಜು. ೨೧: ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಎತ್ತು ಸಾವಿಗೀಡಾಗಿದ್ದು, ಮತ್ತೊಂದು ಎತ್ತು ಮತ್ತು ಉಳುಮೆ ಮಾಡುತ್ತಿದ್ದ ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಬೆಳಿಗ್ಗೆ ದೊಡ್ಡಳ್ಳಿ ಗ್ರಾಮದ ರೈತ ಕುಂಬುಗೌಡನ ಸದಾ ಅವರು ತಮ್ಮ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದರು. ಗದ್ದೆ ಏರಿಯಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಸ್ಪರ್ಶಗೊಂಡು ಎತ್ತು ಸಾವನ್ನಪ್ಪಿದೆ. ಈ ವೇಳೆ ಸದಾ ಅವರಿಗೆ ವಿದ್ಯುತ್ ಸ್ಪರ್ಶಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದೆ. ಸದಾ ಅವರ ಪತ್ನಿ ವೀಣಾ ಗದ್ದೆಯ ಮತ್ತೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದರು. ರೈತ ಸದಾ ಅವರಿಗೆ ಸ್ವಲ್ಪ ಮಟ್ಟಿಗೆ ವಿದ್ಯುತ್ ತಗುಲಿದ್ದರಿಂದ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. -ಭಾಸ್ಕರ್ ಮುಳ್ಳೂರು