ಗೋಣಿಕೊಪ್ಪಲು, ಜು. ೨೦: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಾನಿಯಾಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ವೀರಾಜಪೇಟೆ ತಾಲೂಕು ಆಡಳಿತ ವತಿಯಿಂದ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ತೆರೆಯುವ ಮೂಲಕ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ವಿಧಾನ ಸಭೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ನಿನ್ನೆ ಅಧಿವೇಶನ ಮುಗಿಸುತ್ತಿದ್ದಂತೆಯೇ ತಡರಾತ್ರಿಯ ವೇಳೆ ಬೆಂಗಳೂರಿನಿAದ ವೀರಾಜಪೇಟೆ ಕ್ಷೇತ್ರಕ್ಕೆ ಆಗಮಿಸಿದರು.

ಮುಂಜಾನೆ ೭ ಗಂಟೆ ವೇಳೆಗೆ ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರೊಂದಿಗೆ ತುರ್ತು ಸಭೆ ನಡೆಸಿ ಕ್ಷೇತ್ರದ ಹಾಗೂ ಕೊಡಗಿನ ಮಳೆಹಾನಿಯ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

ಮುಂಜಾನೆಯೇ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲುವಿನ ಕೀರೆಹೊಳೆಯ ಬದಿಗೆ ಆಗಮಿಸಿದ ಶಾಸಕ ಪೊನ್ನಣ್ಣ ಪ್ರವಾಹ ಪರಿಸ್ಥಿತಿ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಹೊಳೆಯ ಬದಿಯಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಪೊನ್ನಣ್ಣ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ನಿರ್ಬಂಧಿತ ಜಾಗದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರು ವುದರಿಂದ ಮಳೆಗಾಲದಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಹೊಳೆ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳದಲ್ಲಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ತಿಮ್ಮಯ್ಯ ನವರಿಗೂ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಹೊಳೆಯನ್ನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಕೀರೆಹೊಳೆಗೆ ಹೊಂದಿಕೊAಡAತೆ ಸರ್ವಿಸ್ ಸ್ಟೇಷನ್ ನಿರ್ಮಾಣವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಪೊನ್ನಣ್ಣ ನದಿಯ ನೀರಿನ ಹರಿವು ಬದಲಾವಣೆ ಮಾಡಿರುವ ಬಗ್ಗೆ ವೀಕ್ಷಣೆ ಮಾಡಿದರು. ಕೂಡಲೇ ಕಠಿಣ ಕ್ರಮ ಕೈಗೊಳ್ಳಲು

(ಮೊದಲ ಪುಟದಿಂದ) ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಮಳೆಯಿಂದ ಆದ ಹಾನಿಯ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಶಾಸಕರಿಗೆ ಮಾಹಿತಿ ನೀಡಿದರು. ನಂತರ ೬ನೇ ವಿಭಾಗದ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಪ್ರವಾಹದಿಂದ ನೀರು ತುಂಬಿದ ಮನೆಗಳ ಸಂತ್ರಸ್ಥರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ತೋಡಿನಲ್ಲಿ ಹರಿಯುತ್ತಿದ್ದ ನೀರಿನ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ, ಸದಸ್ಯ ಧ್ಯಾನ್ ಸುಬ್ಬಯ್ಯ ಪಕ್ಷದ ಕೆಲವು ಮುಖಂಡರುಗಳು ಶಾಸಕರಿಗೆ ಮಳೆ ಹಾನಿಯ ಬಗ್ಗೆ ಮಾಹಿತಿ ನೀಡಿದರು. ಕೀರೆಹೊಳೆ ಬದಿಯಲ್ಲಿರುವ ಗುಡಿಸಲು ವಾಸಿಗಳಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಟ್ಟಡದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಆಹಾರ ಕಿಟ್‌ಗಳನ್ನು ಶೇಖರಣೆ ಮಾಡಲಾಗಿದೆ. ಅಗತ್ಯವಿದ್ದರೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಪೊನ್ನಂಪೇಟೆ ಕಂದಾಯ ಅಧಿಕಾರಿ ಸುಧೀಂದ್ರ ಶಾಸಕ ಪೊನ್ನಣ್ಣನವರಿಗೆ ಈ ಸಂದರ್ಭ ಮಾಹಿತಿ ನೀಡಿದರು.

ಕಾವೇರಿ ಹಿಲ್ಸ್ನ ಸಂತ ಥೋಮಸ್ ಶಾಲೆಗೆ ತೆರಳುವ ರಸ್ತೆ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿರುವುದನ್ನು ಖುದ್ದಾಗಿ ಪರಿಶೀಲಿಸಿ ಸಂಬAಧಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಬಾಳೆಲೆ ಹೋಬಳಿಯ ಸುಳುಗೋಡು ಗ್ರಾಮಕ್ಕೆ ತೆರಳಿ ಕಾಳಜಿ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಈ ವೇಳೆ ಸಂತ್ರಸ್ತರು ಮನೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಬದಲಿ ಸ್ಥಳವನ್ನು ಗುರುತಿಸಲಾಗುವುದು. ಆ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳ ಮಾತಿಗೆ ಸಂತ್ರಸ್ತ ಕುಟುಂಬಗಳು ಒಪ್ಪಿಗೆ ಸೂಚಿಸಿದವು.

ಬಲ್ಯಮಂಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ತೆರಳಿ ಅಲ್ಲಿದ್ದ ಸಂತ್ರಸ್ತರ ಕಷ್ಟ ಆಲಿಸಿದರು. ಇಲ್ಲಿಯೂ ಕೂಡ ಕುಟುಂಬಗಳು ಬದಲಿ ಸ್ಥಳ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಪೆಮ್ಮಂಡ ಕೆ. ಪೊನ್ನಪ್ಪ ಹಾಗೂ ಇತರ ಸ್ಥಳೀಯರು ಮಳೆಯಿಂದಾದ ನಷ್ಟದ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿ ಸುರಿದ ಮಳೆಯಿಂದಾಗಿ ಗದ್ದೆಗಳಲ್ಲಿ ಬಿತ್ತನೆ ಮಾಡಿದ ಭತ್ತದ ಬೀಜಗಳು ಕೊಚ್ಚಿ ಹೋಗಿವೆ. ಕೆಲವು ಗದ್ದೆಗಳು ಕೊಳೆತು ಹೋಗಿವೆ. ಈ ಬಗ್ಗೆ ‘ಶಕ್ತಿ’ ತಾ.೧೯ರಂದು ವರದಿ ಪ್ರಕಟಿಸಿತ್ತು. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ರೈತರಿಗೆ ಕೊಡಿಸುವಂತೆ ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಆದೇಂಗಡ ವಿನು ಉತ್ತಪ್ಪ, ಗ್ರಾಮಸ್ಥರಾದ ಅಕ್ಬರ್ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ವಿ ಗಮನ ಸೆಳೆದರು. ಶಾಸಕ ಪೊನ್ನಣ್ಣ ರೈತರ ಹಿತದೃಷ್ಟಿಯಿಂದ ಮತ್ತೊಮ್ಮೆ ಬಿತ್ತನೆ ಬೀಜ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.

ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡಿದರು. ರಸ್ತೆ ನಿರ್ಮಾಣದ ಬಗ್ಗೆ ಶಾಸಕರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಬಲ್ಯಮಂಡೂರು, ಟಿ.ಶೆಟ್ಟಿಗೇರಿ ರಸ್ತೆಯ ಮಾರ್ಗವಾಗಿ ಸಂಚರಿಸಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿರುವುದನ್ನು ವೀಕ್ಷಣೆ ಮಾಡಿದರು.

ನಂತರ ಶ್ರೀಮಂಗಲ ಗ್ರಾಮಕ್ಕೆ ತೆರಳಿ ಸ್ಥಳೀಯ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭ ಸ್ಥಳೀಯ ಮುಖಂಡರಾದ ಚೊಟ್ಟೆಯಂಡಮಾಡ ವಿಶು, ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಮಾಜಿ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಬೋಸ್ ಮಾದಪ್ಪ, ಕಾಳಿಮಾಡ ಪ್ರಶಾಂತ್, ಮಾದಿರ ಸುಧಿ, ಮಚ್ಚಮಾಡ ಉದಯ, ಗ್ರಾಮ ಪಂಚಾಯಿತಿ ಸದಸ್ಯರಾದ ಚೋಕಿರ ಕಲ್ಪನ, ಮತ್ತಿತರರು ಮಳೆ ಹಾನಿಯ ಬಗ್ಗೆ ಶಾಸಕರಿಗೆ ವಿವರ ನೀಡಿದರು. ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಕಾಳಜಿ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಭೇಟಿಯ ವೇಳೆ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಕಂದಾಯ ಅಧಿಕಾರಿ ಸುಧೀಂದ್ರ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್, ತೋಟಗಾರಿಕಾ ಇಲಾಖಾಧಿಕಾರಿ ಡೀನಾ, ಎಇಇ ಮಹಾದೇವ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಬಾಳೆಲೆಯ ಶರೀಫ್, ಸಹೇಬ್‌ಗೌಡ, ಶ್ರೀಮಂಗಲದ ಪೂಣಚ್ಚ, ಸಾಗರ್, ಹುದಿಕೇರಿಯ ರವಿಚಂದ್ರ, ನಿತನ್ ಪೊನ್ನಂಪೇಟೆಯ ಹನುಮಂತ, ವಿಂದ್ಯಾ, ಅನ್ವಿತ ವಿವಿಧ ಪಂಚಾಯಿತಿಗಳ ಪಿಡಿಓಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರೊಂದಿಗೆ ಪಾಲ್ಗೊಂಡಿದ್ದರು.