ಕುಶಾಲನಗರ, ಜು. ೨೦: ಕುಶಾಲನಗರ ಒಳಚರಂಡಿ ಯೋಜನೆ ಮೂಲಕ ಅಳವಡಿಸಿರುವ ಅವೈಜ್ಞಾನಿಕ ಕಾಮಗಾರಿಯನ್ನು ತೆರವುಗೊಳಿಸಿ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ಸುಮಾರು ೪.೫ ಕಿ.ಮೀ. ನದಿ ಉದ್ದಕ್ಕೂ ನದಿಯ ಬದಿಯಲ್ಲಿ ಪೈಪ್ ಹಾಗೂ ಮ್ಯಾನ್ಹೋಲ್ಗಳನ್ನು ಅಳವಡಿಸಲಾಗಿದೆ. ಇವುಗಳು ಪ್ರವಾಹ ಸಂದರ್ಭ ನೀರಿನಲ್ಲಿ ಮುಳುಗಡೆ ಯಾಗುತ್ತಿದ್ದು, ತಕ್ಷಣ ತೆರವುಗೊಳಿಸಿ ಕ್ರಮ ಕೈಗೊಳ್ಳುವಂತೆ ಒಳಚರಂಡಿ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕುಶಾಲನಗರ ಪುರಸಭೆ ಆವರಣದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ಕುಶಾಲನಗರ ಪುರಸಭೆಯ ಆಡಳಿತಾಧಿಕಾರಿ ವಿನಾಯಕ ನರ್ವಾಡೆ ಅವರ ಅಧ್ಯಕ್ಷತೆಯಲ್ಲಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಕಾವೇರಿ ನದಿ ಕಲುಷಿತ ಗೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಗಮನಹರಿಸ ಬೇಕು ಎಂದು ಶಾಸಕ ಮಂತರ್ ಗೌಡ ಅವರು ಹೇಳಿದರು.
ಒಳಚಂಡಿ ಯೋಜನೆಯನ್ನು ಈ ವರ್ಷದ ಸೆಪ್ಟೆಂಬರ್ ೧೫ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಅಂತಿಮ ಗಡುವು ನೀಡಿದರು. ಈ ಸಂಬAಧ ಮುಂದಿನ ವಾರ ಸಂಬAಧಿಸಿದ ಅಧಿಕಾರಿಗಳ ಸಭೆಯಲ್ಲಿ ಸಮಗ್ರ ಮಾಹಿತಿ ಒದಗಿಸುವಂತೆ ಒಳಚರಂಡಿ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಅವರಿಗೆ ಸೂಚನೆ ನೀಡಿದರು. ಪುರಸಭೆಗೆ ಒಳಚರಂಡಿ ಯೋಜನೆಯ ಸಮಗ್ರ ಮಾಹಿತಿ ಒದಗಿಸುವಂತೆ ಅವರು ಹೇಳಿದರು.
ಕುಶಾಲನಗರ ವಾರದ ಸಂತೆಯನ್ನು ಹಳೆಯ ಮಾರುಕಟ್ಟೆಗೆ ವರ್ಗಾಯಿಸುವಂತೆ ಸಭೆ ಅನುಮೋದನೆ ನೀಡಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಕುಶಾಲನಗರದಲ್ಲಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಿರುಕುಳ ನೀಡುತ್ತಿರುವುದಾಗಿ ಸಭೆಯಲ್ಲಿ ಚರ್ಚಿಸಿದ ಸದಸ್ಯರಾದ ಅಮೃತರಾಜ್ ಟ್ರಾಫಿಕ್ ಠಾಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮ ಪಾಲಿಸುವ ಮೂಲಕ ವ್ಯಾಪಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ವಾಹನಗಳಿಗೆ ದಂಡ ಹಾಕುವ ಕಾರಣ ಯಾವುದೇ ವಾಹನಗಳು ಪಟ್ಟಣದಲ್ಲಿ ನಿಲುಗಡೆಗೊಳ್ಳುತ್ತಿಲ್ಲ .ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕುಶಾಲನಗರ ಪಟ್ಟಣ ಠಾಣಾಧಿಕಾರಿ ಪ್ರಕಾಶ್ ಪ್ರತಿಕ್ರಿಯಿಸಿ, ಸಂಚಾರಿ ಪೊಲೀಸ್ ಠಾಣೆ ರದ್ದುಕೊಂಡರೆ ನಿಯಮ ಪಾಲನೆಗೆ ಹಾಗೂ ಸಮರ್ಪಕ ಸಂಚಾರ ವ್ಯವಸ್ಥೆ ಗಾಗಿ ಸಿವಿಲ್ ಪೊಲೀಸ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಪೊಲೀಸ್ ಇಲಾಖೆ ಮೂಲಕ ನಿಯಮ ಕಾನೂನು ಪಾಲಿಸಲೇಬೇಕಾಗುತ್ತದೆ. ಬಾಯಿ ಮಾತಿಗೆ ಬಗ್ಗದ ಸಂದರ್ಭ ನಿಯಮಾನುಸಾರ ದಂಡ ವಿಧಿಸಲೇಬೇಕಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ಗುAಡೂರಾವ್ ಬಡಾವಣೆಯಲ್ಲಿ ಅರ್ಧಕ್ಕೆ ನಿರ್ಮಾಣಗೊಂಡಿರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಕಟ್ಟಡವನ್ನು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಕಚೇರಿಗೆ ಬಳಸುವ ನಿಟ್ಟಿನಲ್ಲಿ ಚರ್ಚೆ ನಡೆದು ಪೊಲೀಸ್ ಇಲಾಖೆಗೆ ಬದಲಿ ಜಾಗ ನೀಡುವ ಬಗ್ಗೆ ಕೂಡ ಚರ್ಚಿಸಿದರು.
ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಅಪೂರ್ಣಗೊಂಡಿದ್ದು ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಆಗಿರೋ ಬಗ್ಗೆ ಸಭೆಯಲ್ಲಿ ಆದಷ್ಟು ಬೇಗನೆ ಕೆಲಸ ಪೂರ್ಣಗೊಳಿಸಿ ಪುರಸಭೆ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವAತೆ ಶಾಸಕರು ಅಧಿಕಾರಿಗಳಿಗೆ ಸೂಚನೆ
ನೀಡಿದರು. ಡಿಸೆಂಬರ್ ಅಂತ್ಯದಲ್ಲಿ ಪುರಸಭೆ ಸಂಕೀರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪುರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರನ್ನು ಸ್ವಾಗತಿಸುವುದರೊಂದಿಗೆ ಅಭಿನಂದಿಸಲಾಯಿತು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಮೋದ್ ಮುತ್ತಪ್ಪ ಅವರನ್ನು ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ಒದಗಿಸಿದರು. ಪುರಸಭೆಯ ಒಟ್ಟು ೨೩ ಸದಸ್ಯರು ಮತ್ತು ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.