ಸೋಮವಾರಪೇಟೆ, ಜು. ೧೯: ಹುದುಗೂರು-ಯಡವನಾಡು ಭಾಗದಲ್ಲಿ ಹಾರಂಗಿ ಜಲಾಶಯದಿಂದ ನೀರು ಹರಿಸುವ ನಾಲೆ ದುರಸ್ತಿ ಕಾಮಗಾರಿ ನಡೆದಿದ್ದು, ಈ ಸಂದರ್ಭ ನಾಲೆ ಮೇಲೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವ ಹಿನ್ನೆಲೆ ರಸ್ತೆ ಮೇಲೆ ಕೊಳಚೆ ನೀರು ಶೇಖರಣೆಯಾಗಿ ಸ್ಥಳೀಯರಿಗೆ ಸಮಸ್ಯೆಯಾಗಿದೆ.

ನಾಲೆಯ ಎರಡೂ ಬದಿಗಳಲ್ಲಿ ಬೆಳೆದಿದ್ದ ಮರಗಳನ್ನು ನಾಲೆಯ ಕಾಮಗಾರಿ ಹಿನ್ನೆಲೆ ಕಡಿಯಲಾಗಿದೆ. ನಾಲೆಯ ಮೇಲೆಯೇ ಈ ಹಿಂದೆ ಇದ್ದ ರಸ್ತೆಯನ್ನು ಕೆಲವು ಕಡೆಗಳಲ್ಲಿ ಅಗೆಯಲಾಗಿದೆ. ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದ್ದು, ಈ ಚರಂಡಿಯ ನೀರನ್ನು ನಾಲೆಗೆ ಸಂಪರ್ಕಿಸುವ ಕೆಲಸ ಮಾಡದ ಹಿನ್ನೆಲೆ, ಮಳೆ ನೀರು ರಸ್ತೆಯಲ್ಲಿಯೇ ಸಂಗ್ರಹಗೊAಡು ಕೆಸರಿನ ಕೆರೆಯಂತಾಗಿದೆ.

ಇದೇ ನಾಲೆ ರಸ್ತೆಯ ಮೂಲಕ ಸ್ಥಳೀಯ ಶರತ್, ದೇವೇಂದ್ರ ಅವರುಗಳ ಮನೆಗೆ ತೆರಳಬೇಕಿದೆ. ಇದರೊಂದಿಗೆ ಲಿಂಗಪ್ಪ, ಭರತ್, ಸೋಮಪ್ಪ ಅವರುಗಳಿಗೆ ಸೇರಿದ ತೋಟಕ್ಕೂ ಇದೇ ರಸ್ತೆ ಸಂಪರ್ಕವಾಗಿದೆ. ಕಾಮಗಾರಿ ನಿರ್ವಹಿಸುವ ಸಂದರ್ಭ ರಸ್ತೆ ಮಾಡಿ, ಪಕ್ಕದಲ್ಲಿ ಚರಂಡಿಯನ್ನೂ ನಿರ್ಮಿಸಿದ್ದಾರೆ. ಆದರೆ ಚರಂಡಿಯ ನೀರು ಸರಾಗವಾಗಿ ಹರಿದು ನಾಲೆಗೆ ಹೋಗಲು ತಡೆ ಹಾಕಲಾಗಿದೆ. ಹೀಗಾಗಿ ರಸ್ತೆಯ ಮೇಲೆಯೇ ನೀರು ಸಂಗ್ರಹಗೊAಡಿದ್ದು, ವಾಹನಗಳ ಸಂಚಾರಕ್ಕೆ ತಡೆಯಾಗಿದೆ. ದ್ವಿಚಕ್ರ ವಾಹನಗಳು ತೆರಳಲೂ ಸಹ ಸಾಧ್ಯವಿಲ್ಲದಂತಾಗಿದೆ.

ಈ ಬಗ್ಗೆ ಸಂಬAಧಿಸಿದ ಗ್ರಾಮ ಪಂಚಾಯಿತಿಗೆ, ಹಾರಂಗಿ ನೀರಾವರಿ ನಿಗಮಕ್ಕೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿದಿನ ನಾವುಗಳು ಕೊಳಚೆ ತುಂಬಿದ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ತಕ್ಷಣ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರಾದ ಶರತ್ ಒತ್ತಾಯಿಸಿದ್ದಾರೆ.