ಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ವಹಿಸುವಂತೆ ಜನತೆಗೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಳೆಯ ಕಾರಣದಿಂದ ಜನ, ಜಾನುವಾರು, ಪ್ರಾಣಿ ಪಕ್ಷಿಗಳು ಸೇರಿದಂತೆ ಸರ್ವ ಜೀವ ಸಂಕುಲದ ರಕ್ಷಣೆ, ಸುರಕ್ಷತೆ ಆದ್ಯ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಬೇಕಿದೆ.
(ಮೊದಲ ಪುಟದಿಂದ) ನಮ್ಮ ಸುರಕ್ಷತೆಯ ಜೊತೆಗೆ ನಮ್ಮವರ ಕಾಳಜಿಯೂ ಮುಖ್ಯವಾಗಿದೆ. ಸ್ಥಳೀಯ ಪ್ರಾಧಿಕಾರಗಳಿಂದ ಕೊಡುವ ಇತ್ತೀಚಿನ ಹವಾಮಾನ ಮುನ್ಸೂಚನೆ ಮತ್ತು ಸಲಹೆಗಳನ್ನು ಕಾಲಕಾಲಕ್ಕೆ ಗಮನಿಸಿ, ಆಹಾರ, ನೀರು, ಔಷಧಗಳು, ಟಾರ್ಚ್ಗಳು ಮತ್ತು ಬ್ಯಾಟರಿಗಳು ಮುಂತಾದ ಅಗತ್ಯ ವಸ್ತುಗಳೊಂದಿಗೆ ತುರ್ತು ಕಿಟ್ ತಯಾರಿಸಿಕೊಳ್ಳುವುದು ಒಳಿತು, ಪ್ರವಾಹ ಅಧಿಕಗೊಂಡ ಪ್ರದೇಶಗಳಲ್ಲಿ ವಾಹನ ಓಡಿಸುವುದು ಅಥವಾ ನಡೆದು ಹೋಗುವುದನ್ನು ಮಾಡಬೇಡಿ, ಸಾಧ್ಯವಾದಷ್ಟು ಮನೆಯಲ್ಲಿಯೆ ಉಳಿದುಕೊಳ್ಳಿ, ನಮ್ಮ ಮನೆಯ ಪರಿಕರ, ಕಾಗದ ಪತ್ರಗಳನ್ನು ಸುರಕ್ಷಿತವಾಗಿ ಇಡುವಂತೆ ಪೊನ್ನಣ್ಣ ತಿಳಿಸಿದ್ದಾರೆ.
ಸ್ಥಳೀಯ ತುರ್ತು ಸೇವೆಗಳು ಮತ್ತು ಆಶ್ರಯ ತಾಣಗಳು ಸೇರಿದಂತೆ ತುರ್ತು ಸಂಪರ್ಕಗಳ ಪಟ್ಟಿಯನ್ನು ತಯಾರಿಸಿ ನಮ್ಮ ಪಕ್ಕದಲ್ಲಿಯೇ ಇಟ್ಟುಕೊಳ್ಳುವುದು ಒಳಿತು, ದಯವಿಟ್ಟು ಹಿರಿಯರು ಅಥವಾ ದುರ್ಬಲರಿಗೆ ಅಗತ್ಯ ಸಹಾಯಗಳನ್ನು ಮಾಡಿ, ಏನೇ ತುರ್ತು ಸಂದರ್ಭಗಳು ಎದುರಾದರೂ ತಕ್ಷಣಕ್ಕೆ ಯಾವುದೇ ಮುಜುಗರ ಅಳುಕಿಲ್ಲದೆ, ಸಮೀಪದಲ್ಲಿ ಇರುವವರ ಸಹಾಯ ಪಡೆದುಕೊಳ್ಳಿ ಎಂದು ತಿಳಿಸಿರುವ ಪೊನ್ನಣ್ಣ ತನ್ನನ್ನು ಯಾವುದೇ ಸಮಯಕ್ಕಾದರೂ ಸಂಪರ್ಕಿಸಲು ಮುಕ್ತ ಅವಕಾಶವಿದೆ. ಸಾರ್ವಜನಿಕ ಸಂಪರ್ಕಕ್ಕಾಗಿ, ಸಹಾಯವಾಣಿ ಸಂಖ್ಯೆಗಳನ್ನ ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.