ಮಡಿಕೇರಿ, ಜು. ೧೯: ಕೊಡಗು ಜಿಲ್ಲೆಗೆ ವ್ಯತಿರಿಕ್ತವಾಗಿ ಪರಿಣಮಿಸು ವಂತೆ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಗಳ ವಿರುದ್ಧ ಜಿಲ್ಲಾದ್ಯಂತ ಹೋರಾಟ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ನೂತನ ಸಂಸದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಕೃಷಿ ಭೂಮಿ ಗಳಲ್ಲಿರುವ ಮರಗಳ ಹಕ್ಕು ಘೋಷಣೆ, ವನ್ಯಜೀವಿ ಉತ್ಪನ್ನಗಳನ್ನು ಸರಕಾರಕ್ಕೆ ಹಿಂದಿರುಗಿಸುವುದು ಹಾಗೂ ಜಿಲ್ಲೆಯ ವಿವಿಧೆಡೆ ಮೀಸಲು ಅರಣ್ಯ ಮಾಡ ಬೇಕೆಂಬ ನಿಟ್ಟಿನಲ್ಲಿ ಹೊರಡಿಸಿರುವ ಸುತ್ತೋಲೆಗಳನ್ನು ಸರಕಾರ ಹಿಂಪಡೆಯಬೇಕು ಎಂಬ ಒತ್ತಾಯ ಮೊಳಗಿತು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಈ ಕುರಿತು ನಿರ್ಣಯ ಓದಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದ ನಂತರ ಜನವಿರೋಧಿ ಸುತ್ತೋಲೆಗಳನ್ನು ಹೊರಡಿಸಿ ಸಮಸ್ಯೆ ಉದ್ಭವಿಸುವಂತೆ ಮಾಡುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಗೆ ರಾಜ್ಯ ಸರಕಾರ ಹೊಸ ಅಧಿಸೂಚನೆ ತರುವ ಮೂಲಕ ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ಆದೇಶ ಮಾಡಿದೆ. ಕೊಡಗಿನಲ್ಲಿ ಪಾರಂಪರಿಕವಾಗಿ ಬಂದ ಉತ್ಪನ್ನ ಧಾರ್ಮಿಕ ವಿಚಾರಗಳಿಗೆ ಬಳಕೆ ಮಾಡಲಾಗುತ್ತದೆ. ಜೊತೆಗೆ ಭಾವನಾತ್ಮಕವಾಗಿಯೂ ಬೆರೆತಿದೆ. ಅದನ್ನು ಹಿಂದಿರುಗಿಸಲು ಮಾಡಿರುವ ಸುತ್ತೋಲೆ ಸರಿಯಲ್ಲ. ಈ ಅಧಿಸೂಚನೆಯನ್ನು ಕೇಂದ್ರ ಸರಕಾರ ಒಪ್ಪಿಕೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದ್ದು, ಈ ನೀತಿಗೆ ಕಾಂಗ್ರೆಸಿಗರೇ
(ಮೊದಲ ಪುಟದಿಂದ) ಕೋರ್ಟ್ ಮೂಲಕ ತಡೆಯಾಜ್ಞೆ ತಂದಿರುವುದು ಹಾಸ್ಯಾಸ್ಪದ. ಕೊಡಗಿಗೆ ಧಕ್ಕೆ ಆಗುವ ಕಾನೂನು ರೂಪಿಸುವಾಗ ನಮ್ಮ ಸರಕಾರದ ವಿರುದ್ಧವೇ ಶಾಸಕರಾಗಿದ್ದ ನಾವು ಪ್ರತಿಭಟನೆ ಮಾಡಿದ್ದೆವು. ಮರುದಿನ ಆದೇಶ ಹಿಂಪಡೆಯಲಾಗಿತ್ತು. ಇದು ನಮ್ಮ ಬದ್ಧತೆಯಾಗಿದೆ. ಜೊತೆಗೆ ಕೃಷಿಭೂಮಿಗಳಲ್ಲಿರುವ ಮರಗಳ ಮೇಲಿನ ಹಕ್ಕನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಬೇಕೆಂಬ ಸುತ್ತೋಲೆಯೂ ಸರಿಯಲ್ಲ ಎಂದು ಆಕ್ಷೇಪಿಸಿದರು.
ಮೀಸಲು ಅರಣ್ಯ ಪ್ರಸ್ತಾಪಕ್ಕೆ ವಿರೋಧ
ಜಿಲ್ಲೆಯ ವಿವಿಧೆಡೆಗಳಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಪ್ರಸ್ತಾಪ ಕೊಡಗು ಜಿಲ್ಲೆಗೆ ಮಾರಕ. ಇದು ಜನರ ಬದುಕಿಗೆ ಕೊಳ್ಳಿ ಹಿಡಿಯುವ ಸುತ್ತೋಲೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದಲ್ಲಿ ಮುಂದೆ ದೊಡ್ಡ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಬೋಪಯ್ಯ ಎಚ್ಚರಿಸಿದರು.
ಸಿ ಮತ್ತು ಡಿ ಲ್ಯಾಂಡ್, ಕಂದಾಯ ಜಾಗವನ್ನು ಮೀಸಲು ಅರಣ್ಯ ಮಾಡಬೇಕೆಂಬ ಪ್ರಸ್ತಾಪ ಇದಾಗಿದೆ. ಇದಕ್ಕಾಗಿ ವ್ಯವಸ್ಥಾಪನಾ ಧಿಕಾರಿಯನ್ನು ನೇಮಿಸಲಾಗಿದೆ. ಗುರುತಿಸಿರುವ ಜಾಗದಲ್ಲಿ ಬಡವರು ಮನೆ ನಿರ್ಮಿಸಿದ್ದಾರೆ. ತೋಟವಿದೆ. ದೇವರಕಾಡು, ದೇವಾಲಯಗಳಿವೆ. ಅಲ್ಪ ಪ್ರಮಾಣದ ಒತ್ತುವರಿ ಮಾಡಿ ತೋಟ ಮಾಡಿ ಹಲವರು ಬದುಕು ರೂಪಿಸಿಕೊಂಡಿದ್ದಾರೆ. ಇಂತಹ ಜಾಗವನ್ನು ಮೀಸಲು ಅರಣ್ಯವಾಗಿ ಮಾಡುವ ಕ್ರಮ ಖಂಡನೀಯ. ಜಾರಿಗೆ ಬಂದರೆ ಜಿಲ್ಲೆಯ ಪರಿಸ್ಥಿತಿ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಸ್ಥಾನ ಅಲಂಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತ ವಿಶ್ವಗುರು ವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕ ಸ್ಥಿತಿ ಬುಡಮೇಲಾಗಿತ್ತು. ಇದೀಗ ಆರ್ಥಿಕ ಮಟ್ಟ ೫ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದೆ ಪಾರದರ್ಶಕ ಆಡಳಿತ ಕೇಂದ್ರ ನಡೆಸುತ್ತಿದೆ. ಭ್ರಷ್ಟಾಚಾರ ಮುಕ್ತ ದೇಶ ಕಟ್ಟಲು ಮೋದಿ ಶ್ರಮಿಸುತ್ತಿದ್ದಾರೆ ಎಂದರು.
ದೇಶದಲ್ಲಿ ಬಿಜೆಪಿ ಸರಕಾರ ಬಂದ ನಂತರ ೩೯೯ ವೈದ್ಯಕೀಯ ಕಾಲೇಜು, ೧.೪೫ ಲಕ್ಷ ಕಿ.ಮೀ. ಹೊಸ ಹೆದ್ದಾರಿ, ೧೪೯ ನೂತನ ವಿಮಾನ ನಿಲ್ದಾಣ, ವಂದೆ ಭಾರತ್ ರೈಲ್ವೆ ಯೋಜನೆ ರೂಪಿಸುವುದರೊಂದಿಗೆ ಭಯೋತ್ಪಾದನೆ ಹಾಗೂ ದೇಶದ್ರೋಹಿ ಚಟುವಟಿಕೆಯನ್ನು ನಿಗ್ರಹಿಸಿದೆ. ಸೇನಾ ಬಲ ಗಟ್ಟಿಯಾಗಿದ್ದು, ಶತ್ರುರಾಷ್ಟçಗಳು ಭಯದಲ್ಲಿವೆ. ಸೇನಾನಿ ಅಭಿನಂದನ್ ಪಾಕಿಸ್ತಾನ ವಶದಲ್ಲಿದ್ದ ಸಂದರ್ಭ ಅವರನ್ನು ಸುರಕ್ಷಿತವಾಗಿ ಭಾರತ ಸರಕಾರ ಕರೆತಂದಿದ್ದು ಭಾರತ ಬಲಿಷ್ಠತನಕ್ಕೆ ಉದಾಹರಣೆ ಎಂದರು.
ನೂತನ ಸಂಸದರುಗಳಿಗೆ ಸನ್ಮಾನ
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ದಕ್ಷಿಣ ಕನ್ನಡ ಸಂಸದ ಬ್ರಿಜೇಷ್ ಚೌಟ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾರ್ಯಕರ್ತರು ಹಾಗೂ ನಾಯಕರ ಶ್ರಮದಿಂದ ದೊಡ್ಡ ಗೆಲುವು ದೊರೆತಿದ್ದು, ಈ ಗೆಲುವು ಕಾವೇರಿ ಮಾತೆ, ಚಾಮುಂಡೇಶ್ವರಿ, ಬಾಲರಾಮನ ಗೆಲುವಾಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಭಿನ್ನತೆ ಇರಬಹುದು. ಆದರೆ, ಕೊಡಗು ಕೊಡಗಾಗಿ ಹಾಗೂ ಮೈಸೂರು ಮೈಸೂರಾಗಿ ಉಳಿಯಬೇಕೆಂಬುದು ಉಭಯ ಜಿಲ್ಲೆ ಜನರ ಬೇಡಿಕೆ ಯಾಗಿದೆ. ಇಲ್ಲಿನ ಪರಿಸರ, ಪರಂಪರೆ ಉಳಿಸಬೇಕೆಂಬುದು ತನ್ನ ಆದ್ಯತೆ. ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿಯೂ ಪಕ್ಷದ ಗೆಲುವಿಗೆ ಕಟಿಬದ್ಧರಾಗಿ ಶ್ರಮಿಸಬೇಕು. ತಾನು ಕೂಡ ಪಕ್ಷದ ಸೇವೆಗೆ ಸಿದ್ಧ. ಕೊಡಗಿಗಾಗಿ ಸದಾ ಲಭ್ಯವಾಗಿರುತ್ತೇನೆ ಎಂದು ಹೇಳಿದರು.
ದಕ್ಷಿಣ ಕನ್ನಡ ಸಂಸದ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಷ್ ಚೌಟ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಬಾರಿ ದೊರೆತ ಗೆಲುವು ಸಾಧಾರಣ ಗೆಲುವಲ್ಲ. ಮೂರನೇ ಬಾರಿ ಬಿಜೆಪಿಯನ್ನು ಆಯ್ಕೆ ಮಾಡಿರುವುದು ವಿಚಾರ, ಸಿದ್ಧಾಂತ, ಹಿಂದೂತ್ವದ ಗೆಲುವಾಗಿದೆ. ಧÀರ್ಮ ಮತ್ತು ಅಧರ್ಮಗಳ ನಡುವೆ ಈ ಬಾರಿ ಚುನಾವಣೆ ನಡೆಯಿತು. ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನ ಬೋಧನೆ ಮಾಡುತ್ತಿರುವುದು ದುರಂತ. ಪ್ರಜಾಪ್ರಭುತ್ವ, ಸಂವಿಧಾನ ಉಳಿದಿರುವುದು ಬಿಜೆಪಿ ಹಾಗೂ ಜನಸಂಘದ ಕಾರಣದಿಂದ ಎಂದ ಅವರು, ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ದುರಾಡಳಿತ ನೀಡುತ್ತಿದೆ. ವ್ಯಾಪಕ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಆರ್ಥಿಕ ಅಶಿಸ್ತು, ಜನವಿರೋಧಿ ನೀತಿಯೊಂದಿಗೆ ಬಿಜೆಪಿ ಕಾರ್ಯ ಕರ್ತರನ್ನು, ಶಾಸಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಹೆದರಿಸುವ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ ಜಿ.ಪಂ. ತಾ.ಪಂ. ಚುನಾವಣೆ ನಡೆಯಲಿದೆ. ಸಂಘಟನಾತ್ಮಕ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಅಂತರದಲ್ಲಿ ಸೋಲಾಗಿತ್ತು. ಜಿಲ್ಲೆಯಲ್ಲಿ ಬಿಜೆಪಿ ಮುಳುಗಿತು ಎಂಬ ಮಾತಿತ್ತು. ಆದರೆ, ಸಹಕಾರ ಸಂಘಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಪಕ್ಷದ ಶಕ್ತಿ ಪ್ರದರ್ಶನ ಮಾಡಿದ್ದೆವು. ಅನಂತರ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಕೊಡಗು ಜಿಲ್ಲೆಯಿಂದ ೭೫ ಸಾವಿರ ಮತಗಳ ಅಂತರ ಗೆಲುವಿಗೆ ಸಹಾಯಕ ವಾಯಿತು. ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿಯೂ ಅ ಹೆಚ್ಚಿನ ಮತಗಳ ಅಂತರದಿAದ ಗೆಲ್ಲಿಸುವಲ್ಲಿ ಕೊಡಗಿನ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಅಮಿಷವೊಡ್ಡಿ ಗೆದ್ದು ಇದೀಗ ರಾಜ್ಯವನ್ನು ದಿವಾಳಿ ಮಾಡಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹಗರಣಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಮಾಡುವ ಹಕ್ಕನ್ನು ಕಸಿಯುವ ಕೆಲಸವಾಗುತ್ತಿದೆ. ಸುಳ್ಳು ಎಫ್.ಐ.ಆರ್.ಗೆ ತಡೆಯಾಜ್ಞೆ ನೀಡುವ ಮೂಲಕ ಕೋರ್ಟ್ ಛೀಮಾರಿ ಹಾಕಿದೆ. ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪ್ರತಿ ಶಕ್ತಿಕೇಂದ್ರ ಮಟ್ಟದಲ್ಲಿ ಈ ಸಂಬAಧ ಪ್ರತಿಭಟನೆ ನಡೆಸಲಾಗುತ್ತದೆ. ಬಲತ್ಕಾರವಾಗಿ ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂಬ ವದಂತಿ ಸೃಷ್ಟಿಸಲಾಗುತ್ತಿದೆ ಎಂದು ಕಿಡಿಕಾರಿದರು.
ನಿರ್ಣಯ ಮಂಡನೆ
ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಂಡಿಸಿದರು. ಇದಕ್ಕೆ ಬಿ.ಬಿ. ಭಾರತೀಶ್, ತಳೂರು ಕಿಶೋರ್ ಕುಮಾರ್ ಅನುಮೋದನೆ ನೀಡಿದರು. ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸುವ ನಿರ್ಣಯವನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಂಡಿಸಿದರು. ಇದನ್ನು ಪಳೆಯಂಡ ರಾಬಿನ್ ದೇವಯ್ಯ, ಬಿ.ಕೆ. ಅರುಣ್ ಕುಮಾರ್ ಅನುಮೋದಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ರಾಜ್ಯ ಸರಕಾರದ ವಿರುದ್ಧ ಖಂಡನ ನಿರ್ಣಯ ಮಂಡಿಸಿದರು. ರೀನಾ ಪ್ರಕಾಶ್, ಸುಬ್ರಮಣ್ಯ ಉಪಾಧ್ಯಾಯ ಅನುಮೋದಿಸಿದರು. ಕಾರ್ಯ ಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಬಿ.ಬಿ. ಭಾರತೀಶ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್ ಕುಮಾರ್, ಮಹೇಶ್ ಜೈನಿ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮಡಿಕೇರಿ ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ರಾಜ್ಯ ಪೂರ್ವ ಸೈನಿಕ ಪ್ರಕೋಷ್ಠ ಸಂಚಾಲಕ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಅಪ್ರ್ರು ರವೀಂದ್ರ, ರೈತ ಮೋರ್ಚಾ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಸ್ ಮಟ್ಟಂ, ಎಸ್.ಸಿ. ಮೋರ್ಚಾ ಅಧ್ಯಕ್ಷ ಎಂ.ಪಿ. ರವಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ್ ಹಾಜರಿದ್ದರು. ಮಹೇಶ್ ಜೈನಿ ಸ್ವಾಗತಿಸಿ, ಲೋಕೇಶ್ ನಿರೂಪಿಸಿ, ನೆಲ್ಲೀರ ಚಲನ್ ವಂದಿಸಿದರು.