ಸೋಮವಾರಪೇಟೆ, ಜು. ೧೯: ಪಟ್ಟಣದಿಂದ ಆಲೇಕಟ್ಟೆ ರಸ್ತೆ ಮೂಲಕ ಹಾನಗಲ್ಲು ಬಾಣೆ ಗ್ರಾಮ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿದೆ. ಒಂದು ವೇಳೆ ಈ ರಸ್ತೆ ಕುಸಿದರೆ ಹಾನಗಲ್ಲು ಬಾಣೆಗೆ ಸಂಪರ್ಕ ಕಡಿತಗೊಳ್ಳಲಿದ್ದು, ಇದರ ಜೊತೆಯಲ್ಲಿಯೇ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಗೂ ಕಂಟಕ ಎದುರಾಗಿದೆ. ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಒಂದು ಬದಿ ಈಗಾಗಲೇ ಕುಸಿಯುತ್ತಿದೆ. ಈ ರಸ್ತೆಯಿಂದ ಹಾನಗಲ್ಲು ಬಾಣೆ ಸಂಪರ್ಕಿಸುವ ಜಿ.ಪಂ.ಗೆ ಸೇರಿದ ರಸ್ತೆ ಪ್ರಸಕ್ತ ಮಳೆಗೆ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರೀ ಅಪಾಯ ತಂದೊಡ್ಡುವ ಆತಂಕ ಸೃಷ್ಟಿಸಿದೆ.

ಕಳೆದ ಮಳೆಗಾಲದಲ್ಲಿ ಕುಸಿಯಲು ಆರಂಭಿಸಿದ ಮಣ್ಣಿನ ಬರೆಗೆ ತಾತ್ಕಾಲಿಕವಾಗಿಯೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆ ಇದೀಗ ರಸ್ತೆಯ ಅಂಚಿನಿAದ ಕೇವಲ ಅರ್ಧ ಅಡಿಯಲ್ಲಿ ಬರೆ ಕುಸಿತವಾಗುತ್ತಿದೆ.

ಈ ಪ್ರದೇಶ ಚೌಡ್ಲು ಗ್ರಾಮ ಪಂಚಾಯಿತಿಗೆ ಒಳಪಡುತ್ತಿದ್ದು, ಇದೇ ರಸ್ತೆ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಆಗಿದೆ. ಇದರೊಂದಿಗೆ ಹಾನಗಲ್ಲು ಬಾಣೆಯಲ್ಲಿ ೮೦ಕ್ಕೂ ಅಧಿಕ ಕುಟುಂಬಗಳಿದ್ದು, ಸೆಸ್ಕ್ನ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೈನ್‌ಮೆನ್‌ಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹವಿದೆ. ಇದರೊಂದಿಗೆ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಂಗ್ರಹಾಗಾರ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ.

ಈ ರಸ್ತೆಯು ಹಾನಗಲ್ಲು ಶೆಟ್ಟಳ್ಳಿ ಮೂಲಕ ಹಾನಗಲ್ಲು ಗ್ರಾಮ, ಯಡೂರು ಗ್ರಾಮ ಸಂಪರ್ಕದ ರಸ್ತೆಯಾಗಿಯೂ ಬಳಕೆಯಾಗುತ್ತಿದೆ. ಇಷ್ಟೇ ಅಲ್ಲದೇ ಹಾನಗಲ್ಲು ಬಾಣೆ, ಕಾನ್ವೆಂಟ್ ಬಾಣೆ, ಆಲೇಕಟ್ಟೆ ರಸ್ತೆ, ಚೌಡ್ಲು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಯಾರಾದರೂ ಮೃತರಾದರೆ ಶವಸಂಸ್ಕಾರಕ್ಕೆ ಹಾನಗಲ್ಲು ಬಾಣೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಗೆ ಸಾಗಿಸಬೇಕಿದೆ.

ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರಿAಗ್ ವಿಭಾಗಕ್ಕೆ ಒಳಪಟ್ಟಂತೆ ಈ ರಸ್ತೆಯಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕಳೆದ ಏಳೆಂಟು ವರ್ಷಗಳ ಹಿಂದೆ ಕೈಗೊಂಡ ಕಲ್ಲಿನ ತಡೆಗೋಡೆ ಕಟ್ಟುವ ಕಾಮಗಾರಿ ಸಂಪೂರ್ಣ ಕಳಪೆಯಾಗಿ, ನಿರ್ಮಾಣ ಹಂತದಲ್ಲಿಯೇ ಕುಸಿದುಬಿದ್ದ ನಂತರ ಹಾನಗಲ್ಲು ಬಾಣೆ ಸಂಪರ್ಕ ರಸ್ತೆಗೆ ಅಪಾಯ ಎದುರಾಗಿದೆ.

ಇದೀಗ ರಸ್ತೆ ಕುಸಿಯುತ್ತಿದ್ದು, ತಕ್ಷಣಕ್ಕೆ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕಿದೆ. ಇದರೊಂದಿಗೆ ಅಧಿಕ ಭಾರ ಸಾಗಿಸುವ ವಾಹನಗಳ ಓಡಾಟವನ್ನೂ ನಿರ್ಬಂಧಿಸಬೇಕಿದೆ. ರಸ್ತೆಯ ಒಂದು ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ತುರ್ತು ಕ್ರಮಕೈಗೊಳ್ಳಬೇಕಿದೆ. ಆದರೆ ಸಂಬAಧಿಸಿದ ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಒಂದು ವೇಳೆ ಈ ರಸ್ತೆ ಕುಸಿದರೆ, ಇದಕ್ಕೆ ಒತ್ತಿಕೊಂಡAತೆ ಇರುವ ವಿದ್ಯುತ್ ಕಂಬಗಳು ನೆಲಕ್ಕಚ್ಚಲಿವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯೂ ಜರುಗಲಿದೆ. ಮಲ್ಲಳ್ಳಿಯಿಂದ ಸಂಪರ್ಕ ಕಲ್ಪಿಸಿರುವ ಹೈಡಲ್ ಪವರ್ ಪ್ರಾಜೆಕ್ಟ್ನ ಬೃಹತ್ ಕಂಬಗಳೂ ಧರಾಶಾಹಿಯಾಗಲಿವೆ. ಈ ರಸ್ತೆ ಸಂಪೂರ್ಣ ಕುಸಿದು ಸಂಪರ್ಕ ಕಡಿತಗೊಳ್ಳುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಂಡು ರಸ್ತೆಯನ್ನು ಉಳಿಸಿಕೊಳ್ಳಲು ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್, ರಸ್ತೆ ಕುಸಿಯುತ್ತಿರುವ ಸ್ಥಳವನ್ನು ಪರಿಶೀಲಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗೂ ಅಪಾಯ ಎದುರಾಗಿರುವ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಹಾನಗಲ್ಲು ಬಾಣೆ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆಯನ್ನು ಜಿ.ಪಂ. ಮೂಲಕ ಸಲ್ಲಿಸಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ವಿಶೇಷ ಅನುದಾನ ಒದಗಿಸಿ ರಸ್ತೆಯನ್ನು ಉಳಿಸಿಕೊಳ್ಳುವತ್ತ ಯೋಚಿಸಬೇಕಿದೆ.