ವೀರಾಜಪೇಟೆ, ಜು. ೧೮: ಶೌಚಾಲಯದ ಗುಂಡಿಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ವೀರಾಜಪೇಟೆ ತಾಲೂಕು ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ.
ಕೆ.ಬೈಗೋಡು ಗ್ರಾಮದ ಹೆಚ್.ಎ. ಗಣೇಶ್ ಎಂಬವರ ವಾಸದ ಮನೆ ಬಳಿ ನಿರ್ಮಿಸಲಾಗಿರುವ ಶೌಚಾಲಯದ ಗುಂಡಿಗೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆ ಮಳೆಯಾದ ಕಾರಣ ಕಾಲು ಜಾರಿ ಬಿದ್ದು, ಮೇಲೇಳಲು ಸಾಧ್ಯವಾಗದೆ ರೋಧಿಸುತ್ತಿತ್ತು. ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಮಾಡಿ ಗುಂಡಿಯನ್ನು ಜೆಸಿಬಿ ಮೂಲಕ ಅಗಲಗೊಳಿಸಿ ಆನೆಗೆ ಮೇಲೆ ಬರಲು ಸಹಾಯ ಮಾಡಿದ್ದಾರೆ. ಕೂಡಲೇ ಆನೆ ಗುಂಡಿಯಿAದ ಮೇಲೆ ಬಂದು ತೋಟದತ್ತ ಹೆಜ್ಜೆ ಹಾಕಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ರಕ್ಷಿಸಿ ಹತ್ತಿರದಲ್ಲೆ ಇರುವ ಅಯ್ಯಪ್ಪ ದೇವರ ಕಾಡಿಗೆ ಅಟ್ಟಿದ್ದಾರೆ.
ವೀರಾಜಪೇಟೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಗನ್ನಾಥ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ದೇವಯ್ಯ, ಕೆ.ಎಂ. ಉಪವಲಯ ಅರಣ್ಯಾಧಿಕಾರಿ ಸಂಜೀತ್ ಡಿ.ಪಿ, ಗಸ್ತು ಅರಣ್ಯ ಪಾಲಕ ಅರುಣ್ ಸಿ ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳಾದ ಸಚಿನ್, ವಿನೋದ್, ಅಚ್ಚಯ್ಯ, ಹರೀಶ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.