ಚೆಯ್ಯಂಡಾಣೆ, ಜು. ೧೦: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ, ಮರಂದೋಡ, ಕಕ್ಕಬೆ ಗ್ರಾಮಸ್ಥರು ಚೆಯ್ಯಂಡಾಣೆ ಪಟ್ಟಣದಲ್ಲಿ ನಾಪೋಕ್ಲು-ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ಲಗ್ಗೆ ಇಟ್ಟು ಫಸಲು ಭರಿತ ಕಾಫಿ, ಬಾಳೆ, ಅಡಿಕೆ, ಕರಿಮೆಣಸು, ತೆಂಗು ಗಿಡಗಳನ್ನು ತುಳಿದು ಸರ್ವನಾಶ ಪಡಿಸಿದೆ. ತೋಟಗಳನ್ನು ಗದ್ದೆ ರೀತಿಯಲ್ಲಿ ಮಾರ್ಪಟು ಮಾಡಿದೆ.

ಮನೆಯ ಅಂಗಳಕ್ಕೆ ಕೂಡ ಆಗಮಿಸುತ್ತಿದ್ದು ಕಳೆದ ವರ್ಷ ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಕುಂಜಿಲ ಕಕ್ಕಬೆ ಪಂಚಾಯಿತಿಯ ರಾಜ ದೇವಯ್ಯ ಎಂಬವರನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು.

ಕಕ್ಕಬೆಯಲ್ಲಿ ಮನೆಯ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಮಗುಚಿ ಹಾಕಿ ಹಾನಿ ಪಡಿಸಿದೆ. ಹಲವಾರು ಮನೆ ಹಾಗೂ ತೋಟಕ್ಕೆ ತೆರಳುವ ಗೇಟ್‌ಗಳನ್ನು ಹಾನಿಪಡಿಸಿದೆ. ಸರಿ ಸುಮಾರು

(ಮೊದಲ ಪುಟದಿಂದ) ೭೦ ರಿಂದ ೮೦ ಕ್ಕೂ ಹೆಚ್ಚು ಕಾಡಾನೆ ಈ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿದೆ. ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ.

ನಿರಂತರ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ವಾರದಲ್ಲಿ ೩,೪ ದಿನ ವಿದ್ಯುತ್ ಇರುವುದಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ, ಇಂಟರ್ನೆಟ್ ಬಳಕೆದಾರರಿಗೆ ವಿದ್ಯುತ್ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯುತ್ ಇಲ್ಲದಿದ್ದರೆ ಈ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆಗೆ ಇಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾದ ಘಟನೆ ಇಂದು ಚೆಯ್ಯಂಡಾಣೆಯಲ್ಲಿ ನಡೆಯಿತು.

ಮಡಿಕೇರಿ ತಾಲೂಕು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮಾಡಿ ರಸ್ತೆ ತಡೆ ಮಾಡಬೇಡಿ ಎಂದರು. ಅದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಗೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ರಸ್ತೆ ತಡೆ ಕೈಬಿಟ್ಟರು. ಕೂಡಲೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.

ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕಳೆದ ವರ್ಷ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಕೂಡಲೇ ಆನೆಗಳನ್ನು ಹಿಡಿಯುವ ಅಶ್ವಾಸನೆ ಕೊಟ್ಟು ತೆರಳಿದ ಅರಣ್ಯಾಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ, ಎಷ್ಟು ಆನೆಯನ್ನು ಹಿಡಿದಿದ್ದೀರಾ ಎಂದು ಪ್ರಶ್ನಿಸಿದರು.

ಬೆಳಗ್ಗಿನ ಸಮಯದಲ್ಲಿ ಕಾಡಾನೆ ಪಟ್ಟಣದಲ್ಲಿ ರಾಜ ರೋಷವಾಗಿ ತಿರುಗುತ್ತಿದೆ, ಒಂದು ವರ್ಷದಿಂದ ನೀವುಗಳು ಪ್ರಸ್ತಾವನೆಯಲ್ಲೇ ಕಾಲ ಕಳೆಯುತ್ತಿದ್ದು ಪ್ರಸ್ತಾವನೆ ನಮಗೆ ಬೇಡ, ಇಲ್ಲಿ ಯಾರನ್ನಾದರು ಬಲಿ ಪಡೆದ ನಂತರ ಪ್ರಸ್ತಾವನೆ ಸಲ್ಲಿಸುತ್ತೀರಾ ಎಂದು ಕಟುವಾಗಿ ಮಾತನಾಡಿದರು. ಕಾರ್ಮಿಕರಿಗೆ ತೋಟಕ್ಕೆ ತೆರಳಲು ಭಯ ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯಿರಿ ೧೫ ದಿನಗಳ ಗಡುವು ನೀಡುತ್ತಿದ್ದೇವೆ. ಅಷ್ಟರಲ್ಲಿ ಸ್ಪಂದನ ದೊರೆಯದಿದ್ದಲ್ಲಿ ಹೈಕೋರ್ಟ್ಗೆ ಹೋಗಲು ತಯಾರಿಯಲ್ಲಿದ್ದೇವೆ ಎಂದರು.

ನರಿಯAದಡ ಗ್ರಾಮಸ್ಥ ಪೊಕ್ಕುಳಂಡ್ರ ಧನೋಜ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ೨೫ಕ್ಕೂ ಹೆಚ್ಚು ಆನೆಗಳು ತೋಟಗಳಲ್ಲಿ ದಾಂಧಲೆ ನಡೆಸುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಆನೆಗಳು ತುಳಿದು ನಾಶಪಡಿಸುತ್ತಿವೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಜೀವನೋಪಾಯಕ್ಕೆ ಬೆಳೆದ ಬೆಳೆಗಳು ಆನೆಗಳ ಉಪಟಳದಿಂದ ನಾಶವಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಆನೆಗಳ ನಿಯಂತ್ರಣಕ್ಕೆ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರವೇ ಮಧ್ಯಪ್ರವೇಶಿಸಿ ಇದಕ್ಕೆ ಅಂತ್ಯ ಹಾಡಬೇಕಾಗಿದೆ ಎಂದರು.

ಕೊಕೇರಿ ಗ್ರಾಮಸ್ಥೆ ಮಚ್ಚಂಡ ಸುಮತಿ ಮಾತನಾಡಿ, ತೋಟಗಳಲ್ಲಿ ಆನೆಗಳ ಉಪಟಳದಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವ ಪರಿಸ್ಥಿತಿ ಉಂಟಾಗಿದೆ.ಮನೆಯ ಸಮೀಪವಿದ್ದ ದೇವರ ಕಲ್ಲನ್ನು ತುಳಿದು ಹಾನಿಪಡಿಸಿದೆ, ತೋಟಗಳಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸಿ ನಷ್ಟ ಉಂಟು ಮಾಡಿದೆ. ಕಾಡಾನೆಗಳ ನಿಯಂತ್ರಣಕ್ಕೆ ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಕಕ್ಕಬೆ ಯುವಕಪಾಡಿ ಗ್ರಾಮಸ್ಥ ಅಂಜಪರವAಡ ಕುಶಾಲಪ್ಪ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುವಂತಾಗಿದೆ. ಮರಂದೋಡ ಮತ್ತು ಯುವಕಪಾಡಿ ಎರಡು ಗ್ರಾಮಗಳನ್ನು ವಿಭಜಿಸುವ ಒಂದು ರಸ್ತೆ ಇದ್ದು, ಕಾಡಾನೆಗಳು ಇರುವ ಬಗ್ಗೆ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದರೆ ಅಧಿಕಾರಿಗಳು ಬರುವಷ್ಟರಲ್ಲಿ ಕಾಡಾನೆಗಳು ಗ್ರಾಮವನ್ನು ವಿಭಜಿಸುವ ರಸ್ತೆಯ ಒಂದು ಬದಿಯ ತೋಟದಲ್ಲಿದ್ದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಇಲಾಖೆಯ ಅಧಿಕಾರಿಗಳು ಹೇಳಿಕೆ ಕೊಟ್ಟು ಹಿಂಜರಿಯುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಬೆಳೆದ ರೈತರ ಫಸಲುಗಳು ನಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ. ಅಧಿಕಾರಿಗಳ ಇಂತಹ ನಿರ್ಲಕ್ಷತನ ನಿಲ್ಲಬೇಕು. ರೈತರ ತೋಟಗಳಲ್ಲಿರುವ ಮರಗಳನ್ನು ಸ್ವಂತ ಕೆಲಸಕ್ಕೆ ಕಡಿಯಬೇಕಾದರೆ ಅಧಿಕಾರಿಗಳಿಗೆ ಯಾವುದೇ ರೇಂಜ್ ಇಲ್ಲ ಸ್ಥಳಕ್ಕೆ ಬಂದು ರೈತನಿಂದ ಹಣ ವಸೂಲಿ ಮಾಡಿ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಗುಂಡು ಹೊಡೆಯಲು ಅವಕಾಶ ಕೊಡಿ, ನಾವು ಆನೆ ಹಾವಳಿ ತಡೆಗಟ್ಟಿ ತೋರಿಸಿಕೊಡುತ್ತೇವೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಕೋಕೇರಿ ಗ್ರಾಮದ ಚೇನಂಡ ಸಂಪತ್, ನರಿಯಂದಡ ಗ್ರಾಮದ ಬಟ್ಟಿಯಂಡ ಜಯರಾಂ, ಅಶೋಕ್, ಚೇಲಾವರದ ತಮ್ಮಯ್ಯ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶೀಸಿ ಮಾತನಾಡಿ, ಒಂದು ಕಡೆ ಆನೆ ಹಾವಳಿ ಮತ್ತೊಂಡೆದೆ ವಿದ್ಯುತ್ ಸಮಸ್ಯೆ ಇವೆರಡನ್ನು ಕೂಡಲೇ ಪರಿಹರಿಸಬೇಕು. ಇಲ್ಲ ಮುಂದೊAದು ದಿನ ಅಹೋ ರಾತ್ರಿ ಪ್ರತಿಭಟನೆ ನಡೆಸಿ ಹೋರಾಟ ಮಾಡಲಾಗುವುದು ಎಂದರು.

ಕಳೆದ ಕೆಲವು ವಾರಗಳ ಹಿಂದೆ ‘ಅವಘಡಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ತಂತಿ’ ಎಂಬ ವರದಿ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡರೂ ಅದನ್ನು ಚೆಸ್ಕಾಂ ಇಲಾಖೆಗೆ ರವಾನಿಸಿದರೂ ಕೂಡ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಅಧಿಕಾರಿಗಳ ತಂಡ ಭೇಟಿ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ತಾಲೂಕು ಡಿಎಫ್‌ಒ ಜಗನ್ನಾಥ್ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗಿರುವುದರಿಂದ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಕ್ಷಣವೇ ಇಲಾಖೆಯಿಂದ ತಂಡಗಳನ್ನು ನೇಮಿಸಿ ಕ್ರಮ ಕೈಗೊಳ್ಳಲಾಗುವುದು. ಗದ್ದೆಗಳಲ್ಲಿ ಕೃಷಿ ಚಟುವಟಿಕೆ ನಡೆಸುವವರು ಸೋಲಾರ್ ಫೆನ್ಸಿಂಗ್ ಮಾಡಲು ಇಲಾಖೆಯಿಂದ ಅವಕಾಶವಿದ್ದು, ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ವ್ಯಾಪ್ತಿಯಲ್ಲಿರುವ ೫ ಆನೆಗಳನ್ನು ಸೆರೆ ಹಿಡಿಯಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವೀರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳೀರ ದೇವಯ್ಯ ಮಾತನಾಡಿ, ಇಲ್ಲಿರುವ ಆನೆಗಳ ನಿಯಂತ್ರಣಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ೫೦ ಆನೆಗಳಿರುವ ಬಗ್ಗೆ ಶಾಸಕರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಈಗ ಐದು ಆನೆಗಳನ್ನು ಸೆರೆ ಹಿಡಿಯಲು ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಕಾರ್ಯಾಚರಣೆ ನಡೆಸುತ್ತೇವೆ. ಈ ಭಾಗದ ಕೃಷಿಕರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ನಮ್ಮ ಗಮನಕ್ಕೆ ತನ್ನಿ ನಾವು ಗನ್‌ಮ್ಯಾನ್‌ಗಳನ್ನು ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಮೂರ್ನಾಡು ಚೆಸ್ಕಾಂ ಅಧಿಕಾರಿ ಸಂಪತ್ ಮಾತನಾಡಿ, ಕೂಡಲೇ ಈ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಕೊಡಲಾಗುವುದು. ನೂತನ ಖಾಯಂ ಅಭಿಯಂತರರಾಗಿ ಚಿತ್ರೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಚೆಯ್ಯಂಡಾಣೆಗೆ ಕೂಡಲೇ ಖಾಯಂ ಲೈನ್‌ಮ್ಯಾನ್ ನಿಯೋಜಿಸಲಾಗುವುದು. ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಂಡು ಎಲ್ಲಾ ಸಮಸ್ಯೆ ಪರಿಹರಿಸಿ ಕೊಡುವ ಭರವಸೆ ನೀಡಿದರು.

ಈ ಸಂದರ್ಭ ನರಿಯಂದಡ, ಕೋಕೇರಿ, ಚೇಲಾವರ, ಮರಂದೋಡ, ಕರಡ ಅರಪ್ಪಟ್ಟು, ಪೊದವಾಡ ಗ್ರಾಮಸ್ಥರು, ೨ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸದಸ್ಯರು, ೭ ಗ್ರಾಮಕ್ಕೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ವೀರಾಜಪೇಟೆ ಎಸಿಎಫ್ ನೆಹರು, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಚೆಸ್ಕಾಂ ಜೆ.ಇ. ಚಿತ್ರೇಶ್ ಮತ್ತಿತರರು ಇದ್ದರು.

ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅಶ್ರಫ್