ಮಡಿಕೇರಿ, ಜು. ೯ : ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವ ಸೇವಾ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಪ್ರಕಾಶ್ ಕಾರಂತ್ ಕರೆ ನೀಡಿದರು.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಮಡಿಕೇರಿಯ ೨೦೨೪- ೨೫ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿ ಪದಾಧಿಕಾರಿಗಳು ಬದಲಾದ ಕಾಲಘಟ್ಟಕ್ಕೆ ತಕ್ಕ ಹಾಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕು. ಧನಾತ್ಮಕ ಚಿಂತನೆಗಳ ಮೂಲಕ ಜನಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

ಸಹಾಯಕ ರಾಜ್ಯಪಾಲ ಡಿ.ಎಂ.ಕಿರಣ್ ಮಾತನಾಡಿ, ಈ ಬಾರಿ ರೋಟರಿ ಜಿಲ್ಲೆಯಲ್ಲಿ ೮ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಾದಕ ವಸ್ತು ವಿರುದ್ಧ ಜಾಗೃತಿ, ವಾಹನ ಸಂಚಾರಿ ನಿಯಮದ ಅರಿವು, ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು, ಪರಿಸರ ರಕ್ಷಣೆ ಪ್ರಮುಖ ಕಾರ್ಯಕ್ರಮಗಳಾಗಿದೆ ಎಂದರು.

ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ಮ್ಯಾಜಿಕ್ ಆಫ್ ರೋಟರಿ ಎಂಬ ಅಂತರರಾಷ್ಟಿçÃಯ ಸಂದೇಶವನ್ನು ಜನತೆಗೆ ಪರಿಣಾಮಕಾರಿಯಾಗಿ ತಲುಪಿಸುವ ಹೊಣೆ ರೋಟರಿ ಸದಸ್ಯರ ಮೇಲಿದೆ ಎಂದರು.

ರೋಟರಿ ಮಡಿಕೇರಿಯ ನೂತನ ಅಧ್ಯಕ್ಷ ಸುದಯ್ ನಾಣಯ್ಯ ಹಾಗೂ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಅಧಿಕಾರ ಸ್ವೀಕರಿಸಿದರು. ರೋಟರಿ ಪ್ರಮುಖರಾದ ಕೆ.ಸಿ.ಕಾರ್ಯಪ್ಪ, ಬಿ.ಎಂ.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.