ಮಡಿಕೇರಿ, ಜು. ೯: ಮಂಜಿನ ನಗರಿ ಮಡಿಕೇರಿಯಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ಪ್ರಥಮ ಎಸ್.ಆರ್.ವಿ ಫುಟ್ಬಾಲ್ ಕಪ್ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟೀಂ ಬ್ರದರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಟೀಂ ಭಗವತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ೩ ಹಾಗೂ ೪ನೇ ಸ್ಥಾನವನ್ನು ಟೀಂ ಒನ್ ಟಚ್ ಮತ್ತು ವೈಲ್ಡ್ ಮಾಸ್ಟರ್ಸ್ ತಂಡ ಪಡೆದುಕೊಂಡವು.

ನಗರದ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಟೀಂ ಬ್ರದರ್ಸ್ ತಂಡವು ಟೀಮ್ ಒನ್ ಟಚ್ ವಿರುದ್ಧ ಪೆನಾಲ್ಟಿಯಲ್ಲಿ ೧-೦ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಎಲಿಮಿನೇಟರ್ ಪಂದ್ಯವು ಟೀಂ ಭಗವತಿ ಹಾಗೂ ವೈಲ್ಡ್ ಮಾಸ್ಟರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಟೀಂ ಭಗವತಿ ತಂಡವು ಪೆನಾಲ್ಟಿ ಶೂಟ್ ಔಟ್‌ನಲ್ಲಿ ೮-೭ ರ ಜಯ ಪಡೆದುಕೊಂಡು ಕ್ವಾಲಿಫಯರ್‌ಗೆ ಲಗ್ಗೆ ಇಟ್ಟಿತು. ದ್ವಿತೀಯ ಕ್ವಾಲಿಫಯರ್ ಪಂದ್ಯವು ಟೀಂ ಭಗವತಿ ಹಾಗೂ ಟೀಂ ಒನ್ ಟಚ್ ತಂಡದ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ೨ ತಂಡವು ಪೂರ್ಣ ಅವಧಿಯಲ್ಲಿ ಯಾವುದೇ ಗೋಲ್ ಗಳಿಸದೆ ಸಮ ಬಲ ಸಾಧಿಸಿ ಪೆನಾಲ್ಟಿಯತ್ತ ಸಾಗಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಟೀಮ್ ಭಗವತಿ ತಂಡವು ೨-೦ ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್‌ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.

ಫೈನಲ್ ಪಂದ್ಯವು ಟೀಂ ಭಗವತಿ ಹಾಗೂ ಟೀಂ ಬ್ರದರ್ಸ್ ತಂಡದ ನಡುವೆ ನಡೆದು ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಬ್ರದರ್ಸ್ ತಂಡವು ಭಗವತಿ ವಿರುದ್ಧ ೩-೦ ಅಂತರದಲ್ಲಿ ಗೆದ್ದು ಎಸ್ ಆರ್ ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್-೧ ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಟೀಂ ಬ್ರದರ್ಸ್ ತಂಡದ ಹಿಶಾಮ್ ಪಡೆದುಕೊಂಡರೆ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಟೀಂ ಒನ್ ಟಚ್ ತಂಡದ ದಿನೇಶ್ (ಕುಳ್ಳಿ) ಪಡೆದುಕೊಂಡರು. ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಟೀಂ ಬ್ರದರ್ಸ್ ತಂಡದ ಸುರೇಶ್ ಪಡೆದುಕೊಂಡರೆ, ಉದಯೋನ್ಮುಖ ಪ್ರಶಸ್ತಿಯನ್ನು ಟೀಂ ಭಗವತಿ ತಂಡದ ಆಕಾಶ್ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಟೀಂ ಭಗವತಿ ತಂಡದ ನಾಯಕ ಲೋಹಿತ್ (ಪಿಕ) ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಡಿವೈಎಸ್‌ಪಿ ಮಹೇಶ್ ಕುಮಾರ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸುವ ಅಗತ್ಯವಿದೆ ಎಂದರು.ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ, ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ, ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಪ್ರಥಮ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಮಾತನಾಡಿ ಯುವಕ, ಯುವತಿಯರು ದುಶ್ಚಟಗಳಿಗೆ ಬಲಿಯಾಗಿ, ಕಾಲಹರಣ ಮಾಡುವುದನ್ನು ಬಿಟ್ಟು ಬಿಡುವಿನ ಸಮಯದಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾಲಯದ ನಿರ್ದೇಶಕರಾಗಿರುವ ದೇವರಾಜು ಮಾತನಾಡಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಪಂದ್ಯ ಆಯೋಜನೆಗೊಂಡಿರುವುದು ಸಂತೋಷದ ವಿಷಯ. ಕ್ರೀಡೆ ಎಂದ ಕೂಡಲೇ ಬಾಲ್ಯದ ಜೀವನ ಮತ್ತೆ ಮರುಕಳಿಸುತ್ತದೆ. ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು- ಗೆಲುವನ್ನು ಸಮಾನವಾಗಿ ಕಾಣಬಹುದು ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ಚುಮ್ಮಿ ದೇವಯ್ಯ, ರಾಜೇಶ್ವರಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ನಿರ್ದೇಶಕ ಸತೀಶ್, ಪ್ರಾಂಶುಪಾಲೆ ಲಕ್ಷಿö್ಮ ಸಚಿನ್, ಉಪಪ್ರಾಂಶುಪಾಲ ಮಂದಣ್ಣ, ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್, ವಿದ್ಯಾಲಯದ ಸದಸ್ಯರುಗಳಾಗಿರುವ ಕಿರಣ್ ಕುಮಾರ್, ಪ್ರಶಾಂತ್, ದಿಶಾಂತ್, ಪ್ರಜ್ವಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕ್ರೀಡಾಕೂಟಕ್ಕೆ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಉನ್ನೆöÊಸ್ ಎಂ.ಎA, ಇಕ್ರಾ ಪಬ್ಲಿಕ್ ಸ್ಕೂಲ್ ಸಿದ್ದಾಪುರ ಹಾಗೂ ಬೆಂಗಳೂರಿನ ನರಸಿಂಹ (ನಾಣಿ) ಕಾರ್ಯನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು, ವಿವರಣೆಗಾರ ತೀರ್ಥಹಳ್ಳಿಯ ಶಿವು ಗೌಡ ಹಾಗೂ ರಮೇಶ್ ಹೆಬ್ಬಟ್ಟಗೇರಿ ನಡೆಸಿಕೊಟ್ಟರು. ಲೈವ್ ಸ್ಕೋರರ್ ಆಗಿ ಅಶೋಕ್, ರಫೀಕ್, ಹಾಗೂ ಅಜಿತ್ ನಡೆಸಿಕೊಟ್ಟರು.

ಕ್ರೀಡಾಕೂಟದ ಬಹುಮಾನ ವಿತರಣೆ ಸಂದರ್ಭ, ಉಮೇಶ್, ತೆಕ್ಕಡ ಕಾಶಿ ಕಾವೇರಪ್ಪ, ಪವನ್, ಅಚ್ಚಯ್ಯ, ಧ್ಯಾನ್, ಲೋಹಿತ್ (ಪಿಕ), ಸುರ್ಜಿತ್, ಮನೋಜ್, ಅಶೋಕ್, ಲಿಖಿತ್, ಬಿಬ್ಲ, ದಿನೇಶ್, ಬೆಂಝಿ ಪಾಲ್ಗೊಂಡಿದ್ದರು.

-ಅಶೋಕ್ ಮಡಿಕೇರಿ