ಕುಶಾಲನಗರ, ಜು. ೯: ನದಿಯಿಂದ ಕೆರೆ ತುಂಬಲು ನೀರು ಹಾಯಿಸುತ್ತಿದ್ದ ಬೃಹತ್ ಗಾತ್ರದ ಪೈಪ್ ಒಡೆದು ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿದ್ದ ದೃಶ್ಯ ಕುಶಾಲನಗರ ಸಮೀಪ ಕೊಪ್ಪ ಬಳಿ ಆವರ್ತಿ ಗ್ರಾಮದ ರಸ್ತೆ ಬದಿಯಲ್ಲಿ ಮಂಗಳವಾರ ಬೆಳಿಗ್ಗೆ ಕಂಡು ಬಂತು. ಕುಶಾಲನಗರ ಮುಳ್ಳುಸೋಗೆ ಗ್ರಾಮ ಎದುರು ಮುತ್ತಿನ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಾವೇರಿ ನದಿಯಿಂದ ಮೋಟಾರ್‌ಗಳ ಮೂಲಕ ನೀರೆತ್ತಿ ಪಿರಿಯಾಪಟ್ಟಣದ ನೂರಕ್ಕೂ ಅಧಿಕ ಕೆರೆಗಳನ್ನು ತುಂಬಿಸುವ ಯೋಜನೆಗೆ ಅಳವಡಿಸಿದ ಪೈಪ್‌ಗೆ ಹಾನಿ ಉಂಟಾಗಿ ಈ ಪರಿಸ್ಥಿತಿ ಸೃಷ್ಟಿಯಾಗಿತ್ತು.

ತಕ್ಷಣ ಮಾಹಿತಿ ದೊರೆತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ನೀರು ಸರಬರಾಜು ಬಂದ್ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದೆ. ೧೨೦೦ ಅಶ್ವ ಶಕ್ತಿಯ ಆರು ಮೋಟಾರ್ ಪಂಪುಗಳ ಮೂಲಕ ನದಿಯಿಂದ ನೀರೆತ್ತಿ ಪೈಪ್‌ಗಳ ಮೂಲಕ ಪಿರಿಯಾಪಟ್ಟಣ ತಾಲೂಕಿನ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಪೈಪ್ ಒಡೆದ ಕಾರಣ ನೀರು ಸುಮಾರು ನೂರು ಮೀಟರ್‌ಗಿಂತಲೂ ಎತ್ತರಕ್ಕೆ ಚಿಮ್ಮುತ್ತಿದ್ದ ದೃಶ್ಯ ದಾರಿಹೋಕರಿಗೆ ಕಂಡು ಬಂದು ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿದ್ದ ದೃಶ್ಯ ಗೋಚರಿಸಿತು. ರಸ್ತೆಯಲ್ಲಿ ವಾಹನ ಸಂಚಾರ ಸ್ವಲ್ಪಕಾಲ ಸ್ಥಗಿತವಾಗಿತ್ತು. ಯಾವುದೇ ಅನಾಹುತ ಉಂಟಾಗಿಲ್ಲ. -ಚಂದ್ರಮೋಹನ್