ವೀರಾಜಪೇಟೆ, ಜು. ೯: ಅಕ್ರಮ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಾಲು ಸೇರಿದಂತೆ ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ನಾಲ್ಕು ಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಕೆ.ಬಿ. ಶಫೀಕ್ (೨೬), ಮೊಹಮ್ಮದ್ ಆಸೀಂ (೨೧), ಸಮೀರ್ ಕೆ.ಎನ್ (೨೬), ಮುನೀರ್ ಟಿ.ಐ. (೩೦) ಎಂಬವರುಗಳನ್ನು ಬಂಧಿಸಲಾಗಿದೆ. ಕಡಂಗ ಗ್ರಾಮದ ದರ್ಶನ್, ವೀರಾಜಪೇಟೆ ನಗರದ ಸಾಧಿಕ್ ಎಂಬುವವರು ಪರಾರಿಯಾಗಿದ್ದಾರೆ.

ತಾ. ೬ ರಂದು ಮಧ್ಯಾಹ್ನ ೨ ಗಂಟೆಗೆ ಪೆರುಂಬಾಡಿ ಗ್ರಾಮದ ನವ ನಗರ ಸಮೀಪದ ಬಸ್ಸು ತಂಗುದಾಣ ಬಳಿ ಅನಾಮಧೇಯ ವಾಹನಗಳು ನಿಂತಿದ್ದವು. ವ್ಯಕ್ತಿಗಳು ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಬಗ್ಗೆ ಎಂದು ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಇದನ್ನು ತಿಳಿದ ನಗರ ಪೊಲೀಸ್ ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.ರಾಜ್ಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನೆಪದಲ್ಲಿ ಕೆಲವು ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಆ ಮಾರ್ಗದಲ್ಲಿ ಬಂದ ಮಾರುತಿ ಓಮ್ನಿ ಮತ್ತು ದ್ವಿಚಕ್ರ ವಾಹನದ ಬಗ್ಗೆ ಸಂಶಯ ಮೂಡಿದೆ.

ನಾಲ್ಕುಚಕ್ರ ವಾಹನದ ದಾಖಲೆಗಳನ್ನು ಕೇಳಿದ್ದಾರೆ. ದಾಖಲೆಗಳು ಯಾವುದು ಇಲ್ಲದಿರುವುದು ಬೆಳಕಿಗೆ ಬಂದಿದೆ. ಸಮೀಪದಲ್ಲಿ ತಂಗುದಾಣದಲ್ಲಿದ್ದ ಯುವಕರನ್ನು ಪರಿಶೋಧನೆಗೆ ಒಳಪಡಿಸಿದ್ದಾರೆ. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದು ತಿಳಿದು ಬಂದಿದೆ. ಯುವಕರ ಬಳಿ ಕೈಚೀಲ ಒಂದರಲ್ಲಿ ಸುಮಾರು ೧ ಕೆ.ಜಿ. ೮೦೦ ಗ್ರಾಂ ಗಾಂಜಾ ಪತ್ತೆಯಾಗಿದ್ದು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಯುವಕರು ಹೇಳಿಕೊಂಡಿದ್ದಾರೆ. ತಕ್ಷಣವೇ ಯುವಕರನ್ನು ಬಂದಿದ್ದಾರೆ. ಗಾಂಜಾ ಖರೀದಿಗಾಗಿ ಬಂದಿದ್ದ ಎರಡು ಮಂದಿ ಯುವಕರು ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಧನಕ್ಕೊಳಗಾದ ಯುವಕರ ಮೇಲೆ ಮಾದಕ ವಸ್ತುಗಳ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

(ಮೊದಲ ಪುಟದಿಂದ) ಪರಾರಿಯಾಗಿರುವ ಯುವಕರನ್ನು ಬಂದಿಸುವಲ್ಲಿ ಕಾರ್ಯಾಚರಣೆ ಮುಂದುವರೆದಿದೆ.ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿರುವ ದಾಖಲೆಗಳು ಇಲ್ಲದ ನಾಲ್ಕು ದ್ವಿಚಕ್ರ ವಾಹನಗಳು ಮತ್ತು ಒಂದು ಮಾರುತಿ ಓಮ್ನಿ ವಾಹನ ವಶಕ್ಕೆ ಪಡೆದಿದ್ದು, ಕಳ್ಳತನ ಮಾಡಿರುವ ವಾಹನಗಳನ್ನು ಬಳಸಿ ಕೃತ್ಯವೆಸಗಿದ್ದಾರೆ ಎಂದು ಪೊಲೀಸರಲ್ಲಿ ಸಂಶಯ ಮೂಡಿದ್ದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.

-ಕಿಶೋರ್ ಕುಮಾರ್ ಶೆಟ್ಟಿ