ವೀರಾಜಪೇಟೆ, ಜು. ೫ : ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಗಟ್ಟಿಮುಟ್ಟಾಗಿ ಕಟ್ಟಿರುವ ಕಟ್ಟಡಗಳೇ ನೆಲ ಸಮವಾಗುತ್ತಿವೆ. ಈ ನಡುವೆ ವೀರಾಜಪೇಟೆ ಪಟ್ಟಣದಲ್ಲಿರುವ ಹಳೆಯ ಕಟ್ಟಡಗಳು ಯಾವ ಲೆಕ್ಕ..? ಇನ್ನೇನು ಬೀಳುವ ಹಂತದಲ್ಲಿರುವ ಈ ಕಟ್ಟಡಗಳಲ್ಲಿ ಈಗಲೂ ವ್ಯಾಪಾರ ನಡೆಸಲಾಗುತ್ತಿದ್ದು, ಅಮಾಯಕರ ಬಲಿಗೆ ಹಳೆಯ ಕಟ್ಟಡಗಳು ಕಾಯುತ್ತಿವೆ.

ದಿನೇ ದಿನೇ ಬೆಳೆಯುತ್ತಿರುವ ನಗರಕ್ಕೆ ಹಳೆಯ ಕಟ್ಟಡಗಳು ಮುಳುವಾಗುವ ಲಕ್ಷಣ ಕಂಡು ಬರಲಾರಂಭಿಸಿದೆ. ಇಲ್ಲಿನ ಮುಖ್ಯರಸ್ತೆಯ ಆಸುಪಾಸಿನಲ್ಲಿ ಇರುವ ಕೆಲವೊಂದು ಓಬಿರಾಯನ ಕಾಲದ ಕಟ್ಟಡಗಳು ಇಂದೋ, ನಾಳೆಯೋ ಕುಸಿದು ಬೀಳುವ ಹಂತದಲ್ಲಿವೆ. ಇವುಗಳನ್ನು ಇದೇ ಸ್ಥಿತಿಯಲ್ಲಿ ಮುಂದುವರಿಸಿದ್ದೇ ಆದಲ್ಲಿ ಭಾರೀ ಪ್ರಾಣಾಪಾಯಕ್ಕೂ ಕಾರಣವಾಗಲಿದೆ.

ನಗರದ ಮಧ್ಯಭಾಗದಲ್ಲಿ ಇನ್ನೂ ಕೂಡಾ ಓಬಿರಾಯನ ಕಾಲದ ಹಲವು ಕಟ್ಟಡಗಳು ತಲೆಬಾಗಿಸಿಕೊಂಡು ನಿಂತಿವೆ. ಯಾವ ಸಮಯದಲ್ಲಿ ಈ ಕಟ್ಟಡಗಳು ಧರೆಗುರುಳಲಿದೆ ಎನ್ನುವುದನ್ನು ಅಂದಾಜಿಸುವುದು ಕಷ್ಟ. ಇಂಥಹ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಅಪಾಯಕಾರಿ ಕಟ್ಟಡಗಳಲ್ಲಿ ಈಗಲೂ ವ್ಯಾಪಾರ ನಡೆಸಲಾಗುತ್ತಿದೆ. ಯಾವ ಸಮಯದಲ್ಲಿ ಇಡೀ ಕಟ್ಟಡವೇ ಧರೆಗುರುಳಿ ಬೀಳಬಹುದು ಎನ್ನುವುದನ್ನು ಊಹಿಸಲೂ ಅವಕಾಶ ಮಾಡಿಕೊಡದ ಇಂಥಹ ಕಟ್ಟಡಗಳು ಮುಂದಿನ ದಿನಗಳಲ್ಲಿ ರಸ್ತೆ ಬದಿ ಹೋಗುವ ಜನರ ಮೇಲೆ ಬಿದ್ದು ಪ್ರಾಣಾಪಾಯಕ್ಕೂ ಕಾರಣವಾಗಲಿವೆ.

ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಪುರಸಭೆಗೆ ಸೇರಿದ ಕಟ್ಟಡದಲ್ಲಿ ಮಾರುಕಟ್ಟೆ ಇದ್ದು ವಾರದ ಏಳು ದಿನವೂ ಇಲ್ಲಿ ಎಲ್ಲಾ ರೀತಿಯ ಅಂಗಡಿ ಮಳಿಗೆಗಳು ತೆರೆದಿರುತ್ತವೆೆ. ದಿನಸಿ ಪದಾರ್ಥ, ತರಕಾರಿ, ಮಾಂಸ, ಗೃಹ ಉಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಗ್ರಾಹಕರು ಪ್ರತಿದಿನ ಇಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ. ಹಲವು ಜನರು ಅಂಗಡಿ ಮುಂಗಟ್ಟುಗಳನ್ನು ಇಟ್ಟು ಜೀವನೋಪಾಯವನ್ನು ಕಂಡು ಕೊಳ್ಳುತ್ತಿದ್ದಾರೆ. ಬುಧವಾರ ವೀರಾಜಪೇಟೆಯ ವಾರದ ಸಂತೆ ಇದ್ದು, ಈ ದಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಇರುತ್ತದೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಇಲ್ಲಿ ಅಂಗಡಿಗಳನ್ನು ಹಾಕುತ್ತಾರೆ.

ಹೀಗೆ ಹಲವು ಜನರಿಗೆ ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಹಾಗೂ ಅದೆಷ್ಟೋ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಸ್ಥಳವನ್ನು ಒದಗಿಸಿಕೊಟ್ಟಿರುವಂತಹ ಮಾರುಕಟ್ಟೆ ಮಳೆಗಾಲದಲ್ಲಿ ಮಾತ್ರ ಕೊಳಚೆ ಪ್ರದೇಶವಾಗಿ ಬದಲಾಗುತ್ತದೆ. ಮಳೆ ಬಂದಾಗ ಮಳೆ ನೀರು ವ್ಯವಸ್ಥಿತವಾಗಿ ಹರಿದುಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ಮಾರುಕಟ್ಟೆಯಲ್ಲೆಲ್ಲ್ಲಾ ಹರಿದಾಡುತ್ತದೆ. ಅದೇ ರೀತಿ ಅಂಗಡಿ ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರು ಮಾರುಕಟ್ಟೆ ಒಳಾಂಗಣದಲ್ಲಿ ಹರಿದು ಸಂಪೂರ್ಣ ಕೆಸರಿನ ವಾತಾವರಣ ಸೃಷ್ಟಿಯಾಗುತ್ತದೆ.

ಇದರೊಂದಿಗೆ ಕೊಳೆತ ತರಕಾರಿ, ಮಾಂಸದ ಅಂಗಡಿ ತ್ಯಾಜ್ಯ ನೀರು ಹಾಗೂ ಇನ್ನಿತರ ತ್ಯಾಜ್ಯಗಳು ಮಳೆನೀರಿನೊಂದಿಗೆ ಸೇರಿ ಮಾರುಕಟ್ಟೆ ಗಬ್ಬು ನಾರುತ್ತಿರುತ್ತದೆ. ಇದರಿಂದಾಗಿ ಜನರಿಗೆ ಮಾರುಕಟ್ಟೆಯ ಒಳಾಂಗಣ ದಲ್ಲಿ ಸಂಚರಿಸುವುದು ಬಹಳ ಕಷ್ಟ ಸಾಧ್ಯವಾಗಿದೆ. ಹೆಚ್ಚಿನವರು ಈ ರೀತಿ ಮಾರುಕಟ್ಟೆ ಹೊಲಸಾಗಿರುವುದರಿಂದ ವರ್ಷದ ಮೂರ್ನಾಲ್ಕು ತಿಂಗಳು ಮಾರುಕಟ್ಟೆಯಿಂದ ದೂರಸರಿದು ಬೇರೆ ಕಡೆಗಳಲ್ಲಿ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಾರೆ.

ಹಲವು ದಶಕಗಳಿಂದಲೂ ಮಾರುಕಟ್ಟೆ ಇದೇ ರೀತಿಯಲ್ಲಿದ್ದು ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಆರಂಭವಾಗಿಲ್ಲ. ಕೆಲವು ಅಂಗಡಿ ಮಳಿಗೆಗಳಿಗೆ ಸರಿಯಾದಂತಹ ಮೇಲ್ಚಾವಣಿ ವ್ಯವಸ್ಥೆ ಇಲ್ಲದೆ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಟಾರ್ಪಲ್‌ಗಳ ಮೂಲಕ ಹೊದಿಕೆ ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.

ಒಂದು ಶತಮಾನಕ್ಕೂ ಹಿಂದಿನದಾದ ಕಾರಣ ಈಗಿನ ಜನಸಂಖ್ಯೆಗೆ ಹಾಗೂ ಆಧುನಿಕ ವ್ಯವಹಾರಕ್ಕೆ ಬೇಕಾದ ರೀತಿ ಹಾಗೂ ನೈರ್ಮಲ್ಯಕ್ಕೆ ವ್ಯವಸ್ಥಿತವಾದಂತಹ ರೂಪದಲ್ಲಿ ನಿರ್ಮಾಣವಾಗಿಲ್ಲ. ಸಂತೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿಯಿAದ ಕೂಡಿರುತ್ತದೆ.

ಹೆಚ್ಚಿನ ಅಂಗಡಿ ಮಳಿಗೆಗಳು ಹಂಚು ಹಾಗೂ ಶೀಟಿನ ಮೇಲ್ಚಾವಣಿ ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಹಾನಿ ಗೊಳಗಾಗಿದೆ. ಕೆಲವು ಮಾರುಕಟ್ಟೆ ಮಳಿಗೆಗಳ ಮೇಲ್ಚಾವಣಿ ಕಾಂಕ್ರೀಟಿನಿAದ ನಿರ್ಮಾಣ ವಾಗಿದ್ದರೂ ಸಹ ಮೇಲ್ಭಾಗದಲ್ಲಿ ನೀರು ಶೇಖರಣೆಯಾಗಿ ಮಳೆಯ ನೀರು ಅಂಗಡಿ ಮಳಿಗೆಗಳ ಒಳಗೆ ಸೋರಿಕೆಯಾಗುತ್ತಿದೆ.

ಸರ್ಕಾರವು ಈಗಿರುವ ಹಳೆಯ ಮಾರುಕಟ್ಟೆಯನ್ನು ಕೆಡವಿ, ಹೊಸದಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಹಲವು ವರ್ಷ ತೆಗೆದುಕೊಳ್ಳುವುದರಿಂದ ಈ ಸಂದರ್ಭದಲ್ಲಿ ವ್ಯಾಪಾರ ನಡೆಸಲು ಬೇರೆ ಸ್ಥಳಾವಕಾಶವಿಲ್ಲದೆ ಅಂಗಡಿ ಮಳಿಗೆಗಳ ಮಾಲೀಕರ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂಬ ಭಯದಿಂದ ಅಂಗಡಿ ಮಾಲೀಕರು ಮಾರುಕಟ್ಟೆಯ ದುಃಸ್ಥಿತಿ ವಿರುದ್ಧ ಧ್ವನಿ ಎತ್ತುತ್ತಿಲ್ಲ.

- ಈಶಾನ್ವಿ