ಸುಂಟಿಕೊಪ್ಪ, ಜು. ೫: ಶುಕ್ರವಾರ ಬೆಳಿಗ್ಗೆ ಮನೆಯ ಮುಂದೆ ವಾಯು ವಿಹಾರ ಮಾಡುತ್ತಿದ್ದ ಕಾಫಿ ಬೆಳೆಗಾರರ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ಸಮಯ ಪ್ರಜ್ಞೆಯಿಂದ ಓಡಿ ಕಾಡಾನೆಯ ಹಿಡಿತದಿಂದ ಪಾರಾಗಿದ್ದಾರೆ.
ಕೊಡಗರಹಳ್ಳಿ ಲಕ್ಷಿö್ಮ ತೋಟದ ಮಾಲೀಕ ಬಿ.ಡಿ. ಸುಭಾಷ್ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಒಂಟಿ ಸಲಗದ ಗೀಳು, ಜನರ ಕೂಗಾಟ ನಾಯಿಗಳ ಚೀರಾಟದಿಂದ ಕೆಲವು ನಿಮಿಷಗಳ ಕಾಲ ಯಾರಿಗೆ ಏನೂ ತೋಚದ ಅಯೋಮಯ ಪರಿಸ್ಥಿತಿ ಉಂಟಾಗಿತ್ತು. ಈ ನಡುವೆ ಒಂಟಿಸಲಗ ರಸ್ತೆ ದಾಟಿ ತೋಟದೊಳಗೆ ಮರೆಯಾಗಿದೆ.
ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಉಪ್ಪುತೋಡು, ಕಂಬಿಬಾಣೆ, ೭ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು, ಕೆದಕಲ್, ಹೊರೂರು ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆಗಳು ಸಂಚರಿಸುತ್ತಿದ್ದು, ಆನೆ ಮತ್ತು ಮಾನವರ ನಡುವೆ ಮಾಡು ಇಲ್ಲವೇ ಮಡಿ ಎಂಬ ಹಂತವನ್ನು ತಲುಪಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ತಮಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ.