ಕಡಂಗ, ಜು. ೩: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಗೊಂಡು ಗ್ರಾಹಕರ ಕೈ ಸುಡುವಾಗ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೀನಿನ ಬೆಲೆಯೂ ದಾಖಲೆಯತ್ತ ಸಾಗುತ್ತಿದ್ದು, ಮೀನು ಪ್ರಿಯರಿಗೂ ಶಾಕ್ ಆಗಿದೆ. ಎಲ್ಲಾ ವರ್ಷದಂತೆ ಮಳೆಗಾಲ ಪ್ರಾರಂಭವಾದಾಗ ಸಮುದ್ರ, ನದಿಗಳಲ್ಲಿರುವ ಮೀನು ಹಿಡಿಯಲು ಸರ್ಕಾರ ನಿರ್ಬಂಧ ಹೇರುವುದು ಸಹಜವಾಗಿದೆ.
ಮೀನಿನ ಸಂತಾನ ಉತ್ಪತ್ತಿಯಾಗುವ ಸಮಯ ಜೂನ್ ಮತ್ತು ಜುಲೈ ತಿಂಗಳು ಈ ತಿಂಗಳಿನಲ್ಲಿ ಸಮುದ್ರದಲ್ಲಿ ಮೀನು ಹಿಡಿಯಲು ಬೆಸ್ತರಿಗೆ ಸಮುದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗುತ್ತದೆ. ಕೊಡಗು ಹೆಚ್ಚಿನ ಮೀನು ಪ್ರಿಯರ ಜಿಲ್ಲೆಯಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯ ಸಮೀಪವಾದ ಕೇರಳದ ತಲಚೇರಿಯಿಂದ ಮತ್ತು ಮಂಗಳೂರಿನಿAದ ದಿನನಿತ್ಯ ವಿವಿಧ ಬಗೆಯ ಮೀನುಗಳು ಜಿಲ್ಲೆಗೆ ಸರಬರಾಜಾಗುತ್ತವೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಮೀನಿನ ಬೆಲೆ ದಾಖಲೆಯ ಮಟ್ಟಕ್ಕೆ ಹೋಗಿದ್ದು ಭೂತಾಯಿ (ಮತ್ತಿ) ಮೀನಿನ ಬೆಲೆಯು ರೂ. ೩೨೦ ರಿಂದ ೪೦೦ ವರೆಗೆ ಇದ್ದು, ಈ ಒಂದು ಬೆಲೆಗಳ ಅನುಗುಣವಾಗಿ ಕೊಡಗು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮತ್ತಿ ಮೀನಿನ ಬೆಲೆ ರೂ. ೩೪೦ ರಿಂದ ೪೦೦ ರವರೆಗೆ ಏರಿಕೆ ಕಂಡಿದೆ. ಕೆಲವು ಭಾಗದಲ್ಲಿ ಮೀನು ವ್ಯಾಪಾರ ಸ್ಥಗಿತಗೊಂಡಿವೆ.
ಎಲ್ಲಾ ಸಮಯದಲ್ಲೂ ಕಡಿಮೆ ಬೆಲೆಗೆ ಸಿಗುವ ಮತ್ತಿ ಮೀನಿನ ಇತ್ತೀಚಿನ ಬೆಲೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮತ್ತಿ ಮೀನಿನ ಈ ಬೆಲೆಯು ಆಗಸ್ಟ್ ಮೊದಲ ವಾರದ ತನಕ ಇರಬಹುದೆಂದು ಕೇರಳದ ವ್ಯಾಪಾರಸ್ಥರು ಹೇಳುತ್ತಾರೆ. ಹೊಟೇಲ್ಗಳಲ್ಲೂ ವಿವಿಧ ಬಗೆಯ ಮೀನು ಸಿಗುವುದು ಕಷ್ಟಕರವಾಗಿವೆ. ಉಳಿದ ಮೀನಿನ ಬೆಲೆಯು ಹೆಚ್ಚಾಗಿವೆ ಅಂಜಲ್ ಮೀನಿನ ಬೆಲೆ ರೂ. ೧೪೦೦ ಕ್ಕಿಂತಲೂ ಹೆಚ್ಚು ಆಗಿದೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕೆಯೊಂದಿಗೆ ಮೀನಿನ ಬೆಲೆಯಲ್ಲೂ ಏರಿಕೆ ಕಂಡಿದೆ.
- ನೌಫಲ್ ಕಡಂಗ